Advertisement
ಜಿ.ಪಂ.ಗೆ 148.60 ಕೋಟಿ ರೂ., ತಾ.ಪಂ.ಗೆ 267.84 ಕೋಟಿ ರೂ., ಗ್ರಾ.ಪಂ.ಗೆ 17.76 ಕೋಟಿ ರೂ. ಅನುದಾನಕ್ಕೆ ಸಂಬಂಧಿಸಿ ಕ್ರಿಯಾಯೋಜನೆ ತಯಾರಿಸಿ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ವಿವರಿಸಿದರು.
Related Articles
Advertisement
ಈ ಸಭೆ ಜಿಲ್ಲಾ ಯೋಜನಾ ಸಮಿತಿಯ ಎರಡನೇ ಸಭೆಯಾಗಿದ್ದು, ಕ್ರಿಯಾ ಯೋಜನೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಎಸ್. ಜನಾರ್ದನ್, ಎನ್. ಎಸ್. ಶೆಟ್ಟಿ ಮಾಹಿತಿ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವ್ಯವಸ್ಥೆಯ ಧ್ಯೇಯ, ತ್ರಿಸ್ತರ ಆಡಳಿತ ವ್ಯವಸ್ಥೆಯ ಪಾತ್ರದ ಬಗ್ಗೆ ವಿವರಿಸಿದ ಅವರು, ಯೋಜನಾ ಸಮಿತಿ ಹೆಚ್ಚು ಕ್ರಿಯಾಶೀಲವಾಗಿರಬೇಕು. ಇಲ್ಲಿ ರೂಪಿಸಿದ ಯೋಜನೆಗಳು ರಾಜ್ಯ ಬಜೆಟ್‌ನಲ್ಲಿ ಪ್ರತಿಬಿಂಬಿತವಾಗಬೇಕೆಂದರು.
ಗ್ರಾಮ ಮಟ್ಟದಲ್ಲಿ ಯೋಜನೆಗಳು ಯಶಸ್ವಿಯಾಗ ಬೇಕಾದರೆ ಮೂರು ಮುಖ್ಯ ಘಟಕಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುಷ್ಠಾನ ಶಕ್ತಿ ದೊರೆಯಬೇಕೆಂದರು. ಕಳೆದ ಸಾಲಿಗಿಂತ 46.47 ಕೋಟಿ ರೂ. ಅನುದಾನ ಹೆಚ್ಚು ವರಿಯಾಗಿ ಕೋರಲಾಗಿದ್ದು, ನಮ್ಮ ಜಿಲ್ಲೆಯ ನಮ್ಮ ಗ್ರಾಮ ನಮ್ಮ ಯೋಜನೆ ಉತ್ತಮ ಮಾದರಿಯಾಗಿದೆ ಎಂದರು. ಯೋಜನ ಸಮಿತಿ ಸಭೆಯಲ್ಲೂ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಸವಿವರ ಚರ್ಚೆ ನಡೆಯಿತಲ್ಲದೆ, ತ್ಯಾಜ್ಯ ಸಂಪನ್ಮೂಲವಾಗಿ ಪರಿವರ್ತನೆಯಾದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಯೋಜನೆ ಕೋಟೇಶ್ವರ, ಸಾಲಿಗ್ರಾಮ, ಗಂಗೊಳ್ಳಿ ಯಂತಹ ಪಂಚಾಯತ್‌ಗಳಲ್ಲಿ ಅನುಷ್ಠಾನಗೊಳ್ಳಲು ಮುಖ್ಯ ಯೋಜನಾಧಿಕಾರಿಗಳು ಖುದ್ದು ಭೇಟಿ ನೀಡಿ ಪಿಡಿಒ ಗಳನ್ನು ಬೆಂಬಲಿಸುವ ಕೆಲಸವಾಗಬೇಕೆಂದು ಶಾಸಕ ರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ನದಿಗೆ ಕೋಳಿತ್ಯಾಜ್ಯ
ಸೀತಾನದಿಯನ್ನು ಕೋಳಿತ್ಯಾಜ್ಯದಿಂದ ಕಲುಷಿತ ಗೊಳಿಸುತ್ತಿರುವ ಬಗ್ಗೆ ತಾ.ಪಂ. ಸದಸ್ಯರು ಗಮನ ಸೆಳೆದಾಗ ವಾರಂಬಳ್ಳಿ ಮಾದರಿಯನ್ನು ಅಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ವಿವರಿಸಿದರು. ಕ್ರಿಯಾ ಯೋಜನೆಯಲ್ಲಿ ಕೃಷಿಗೆ ನೀರು ಪೂರೈಕೆ ಬಗ್ಗೆ ಏನು ಕ್ರಮಕೈಗೊಳ್ಳಲಾಗಿದೆ ಎಂದು ತಾ.ಪಂ. ಸದಸ್ಯ ಭುಜಂಗ ಶೆಟ್ಟಿ ಪ್ರಶ್ನಿಸಿದರು. ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸಿಇಒ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಶಿವಾನಂದ ಕಾಪಶಿ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಸಭೆಯಲ್ಲಿದ್ದರು. ಜಿ.ಪಂ., ತಾ.ಪಂ., ನಗರ ಸ್ಥಳೀಯ ಸಂಸ್ಥೆಯ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡರು.