Advertisement

ಪ್ರವಾಹ ಪ್ರಹಾರಕ್ಕೆ ಜಿಲ್ಲೆ ಜನ ತತ್ತರ

12:13 PM Aug 06, 2019 | Suhan S |

ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಿಲ್ಲೆಯ ಕೃಷ್ಣೆ ಹಾಗೂ ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿ ಹರಿವು ದಿನೇ ದಿನೇ ಅಪಾಯದ ಮುನ್ಸೂಚನೆ ನೀಡುತ್ತಿದ್ದು, ಪ್ರವಾಹ ಪರಿಸ್ಥಿತಿಯನ್ನು ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಮವಾರ ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲಿಸಿದರು.

Advertisement

ಕೃಷ್ಣಾ ನದಿಗೆ 2.64 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಇದರಿಂದ ಜಮಖಂಡಿ ತಾಲೂಕಿನ ಆರು ಸೇತುವೆಗಳು ಜವಾವೃತಗೊಂಡು, ಸಂಚಾರ ಸ್ಥಗಿತಗೊಂಡಿವೆ. ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ನಂ.34ರ (ಚಿಕ್ಕಪಡಸಲಗಿ ಬಳಿ) ಮೇಲೆ ನೀರು ಹರಿಯಲು ಅರ್ಧ ಅಡಿ ಬಾಕಿ ಉಳಿದಿದ್ದು, ರವಿವಾರ ರಾತ್ರಿಯಿಂದಲೇ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಹೆದ್ದಾರಿ ಸುತ್ತ 144 ಕಲಂ ಅಡಿ ಜಮಖಂಡಿ ತಹಶೀಲಾರ್‌ ಪ್ರಶಾಂತ ಚನಗೊಂಡ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಬೈಕ್‌ ಸಹಿತ ಭಾರಿ ವಾಹನ, ಗುಂಪು ಗುಂಪಾಗಿ ಜನರ ಸಂಚಾರವನ್ನು ಜು.10ರ ವರೆಗೆ ನಿಷೇಧಿದ್ದಾರೆ.

12 ಸೇತುವೆ ಜಲಾವೃತ: ಜಮಖಂಡಿ ತಾಲೂಕಿನ ಕಂಕಣವಾಡಿ-ಗುಹೇಶ್ವರ ಗಡ್ಡಿ, ಮುತ್ತೂರ-ಮುತ್ತೂರ ಗಡ್ಡಿ, ಶೂರ್ಪಾಲಿ-ತುಬಚಿ, ಟಕ್ಕಳಕಿ-ತುಬಚಿ ಹಾಗೂ ಧಾರವಾಡ-ವಿಜಯಪುರ ಸೇತುವೆ ಜಲಾವೃತಗೊಂಡಿದೆ. ಜಮಖಂಡಿ-ಜತ್ತ ರಾಜ್ಯ ಹೆದ್ದಾರಿ ಕೂಡ ಬಂದ್‌ ಆಗುವ ಭೀತಿ ಎದುರಾಗಿದ್ದು, ಈ ಹೆದ್ದಾರಿಯ ಸೇತುವೆ ಪೂರ್ಣ ಜಲಾವೃತಗೊಂಡರೆ ಸುಮಾರು 25 ಗ್ರಾಮಗಳ ರಸ್ತೆ ಸಂಪರ್ಕ ಕಡಿದುಕೊಳ್ಳುವ ಭೀತಿ ಉಂಟಾಗಿದೆ.

ರಬಕವಿ-ಬನಕಟ್ಟಿ ತಾಲೂಕಿನ ಮದನಮಟ್ಟಿ-ರಬಕವಿ ಸೇತುವೆ ಸೋಮವಾರ ಜಲಾವೃತಗೊಂಡಿದ್ದು, ಸಂಚಾರ ಬಂದ್‌ ಆಗಿದೆ. ಅಲ್ಲದೇ ಅಸ್ಕಿ ಗ್ರಾಮ ಭಾಗಶಃ ಜಲಾವೃತಗೊಂಡಿದ್ದು, ಮಂಗಳವಾರದ ಹೊತ್ತಿಗೆ ಇನ್ನಷ್ಟು ನೀರು ಆವರಿಸಿಕೊಳ್ಳುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 12 ಸೇತುವೆಗಳು ಜಲಾವೃತಗೊಂಡಿವೆ. ಮಹಾಲಿಂಗಪುರ ಭಾಗದಲ್ಲಿ ಮೂರು, ರಬಕವಿ-ಬನಹಟ್ಟಿ ಭಾಗದಲ್ಲಿ 1, ಜಮಖಂಡಿ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ 8 ಸೇತುವೆಗಳು ನೀರಿನಲ್ಲಿ ಮುಳುಗಿದ್ದರಿಂದ ಸಂಚಾರ ಸ್ಥಗಿತಗೊಂಡಿವೆ. ಇದರಿಂದ ಜಮಖಂಡಿ ತಾಲೂಕಿನ 23 ಹಳ್ಳಿಗಳಿಗೆ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ, ಸೋಮವಾರದಿಂದ ಸಂಪೂರ್ಣ ಸ್ಥಗಿತಗೊಂಡಿದೆ.

Advertisement

ಎಮ್ಮೆ ಸಾವು-ಬೆಕ್ಕು ಸಾವು: ಕೃಷ್ಣಾ ನದಿ ಪ್ರವಾಹದಿಂದ ಕಂಕಣವಾಡಿಯ ಬಾಳಪ್ಪ ನಿಂಗಪ್ಪ ಕಿಸ್ತಿ ಎಂಬ ರೈತರ ಎಮ್ಮೆ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಕಂಕಣವಾಡಿ ಸುತ್ತ ನೀರು ಆವರಿಸಿಕೊಂಡಿದ್ದರಿಂದ ಎಮ್ಮೆಯನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ವೇಳೆ, ನೀರಿನಲ್ಲಿ ಮುಳುಗಿ ಸತ್ತಿದೆ.

ಮುತ್ತೂರ ಗ್ರಾಮದ 31 ಕುಟುಂಬಗಳನ್ನೂ ಮೈಗೂರ ಪುನರ್‌ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಜಾನುವಾರುಗಳ ಸ್ಥಳಾಂತರ ಕಾರ್ಯವನ್ನು ತಾಲೂಕು ಆಡಳಿತ ನಡೆಸುತ್ತಿದೆ.

234 ಜನರ ಸ್ಥಳಾಂತರ: ಆಲಗೂರ ಗ್ರಾಮದ ಗೌಡರ ಗಡ್ಡಿ ತೋಟದ ವಸ್ತಿಯ ಒಟ್ಟು 78 ಕುಟುಂಬಗಳ 234 ಜನರು, 216 ಜಾನುವಾರುಗಳನ್ನು ಆಲಗೂರ ಪುನರ್‌ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ಒಂದು ಗಂಜಿ ಕೇಂದ್ರ ಆರಂಭಿಸಿದ್ದು, ಜನರಿಗೆ ಊಟ-ಕುಡಿಯುವ ನೀರು, ಆರೋಗ್ಯ ತಪಾಸಣೆ ಒದಗಿಸಲಾಗುತ್ತಿದೆ. ಜಾನುವಾರುಗಳಿಗೆ ತಾಲೂಕು ಆಡಳಿತದಿಂದ ಮೇವು ಒದಗಿಸುವ ಕಾರ್ಯ ನಡೆದಿದೆ.

•ಆಲಗೂರ ಗೌಡರ ಗಡ್ಡಿಯ 234 ಜನ-216 ಜಾನುವಾರು ಸುರಕ್ಷಿತ ಸ್ಥಳಕ್ಕೆ

•ಮತ್ತಷ್ಟು ಏರಿದ ಕೃಷ್ಣೆಯ ನೀರಿನ ಹರಿವು

•ಈ ವರೆಗೆ 12 ಸೇತುವೆ ರಸ್ತೆ ಸಂಚಾರ ಸ್ಥಗಿತ

•23 ಹಳ್ಳಿಗಳಿಗೆ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಸ್ಥಗಿತ

•ನಾಲ್ಕು ಹಳ್ಳಿಗಳು ಸಂಪೂರ್ಣ ನಡುಗಡ್ಡೆ

•ಎರಡು ಗಂಜಿ ಕೇಂದ್ರ ಆರಂಭ

•ನಡುಗಡ್ಡೆ ಹಳ್ಳಿಗೆ ಹೋಗಲು 7 ಬೋಟ್ ವ್ಯವಸ್ಥೆ

•ಜಿಲ್ಲೆಯ ಪ್ರವಾಹಕ್ಕೆ ಎಮ್ಮೆ ಮೊದಲ ಬಲಿ

•ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಭೀತಿ

•ಹೆದ್ದಾರಿ ಸಂಚಾರ ನಿಷೇಧ

Advertisement

Udayavani is now on Telegram. Click here to join our channel and stay updated with the latest news.

Next