Advertisement

ರಾಗಿ ಖರೀದಿ ಕೇಂದ್ರ ತೆರೆಯಲು ಎಚ್ಚೆತ್ತ ಜಿಲ್ಲಾಡಳಿತ

09:53 PM Dec 21, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ರಾಗಿ, ಮುಸುಕಿನ ಜೋಳ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದರೂ ಜಿಲ್ಲಾಡಳಿತ ಈ ದಿಸೆಯಲ್ಲಿ ರಾಗಿ ಖರೀದಿ ಕೇಂದ್ರಗಳ ಸ್ಥಾಪನೆಗೆ ಯಾವುದೇ ಕ್ರಮ ಕೈಗೊಳ್ಳದೇ ವಿಳಂಬ ತೋರುತ್ತಿದ್ದರ ಕುರಿತು ಉದಯವಾಣಿ ವರದಿ ಪ್ರಕಟಿಸುತ್ತಿದ್ದಂರೆ ಜಿಲ್ಲಾಡಳಿತ ಎಚ್ಚೆತ್ತಿದೆ.

Advertisement

ಶನಿವಾರ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ “ರಾಗಿ ಖರೀದಿ ಕೇಂದ್ರ ತೆರೆಯದೇ ಕೈ ಚೆಲ್ಲಿದ ಜಿಲ್ಲಾಡಳಿತ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ಶನಿವಾರ ಜಿಲ್ಲಾಧಿಕಾರಿ ಆರ್‌.ಲತಾ, ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್‌ ಸಭೆ ನಡೆಸಿ ರಾಗಿ ಖರೀದಿ ಕೇಂದ್ರಗಳ ಸ್ಥಾಪನೆಗೆ ಸೂಚಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರ 2019-20 ನೇ ಸಾಲಿನಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮತ್ತು ಬಿಳಿಜೋಳ ಆಹಾರಧಾನ್ಯಗಳ ಖರೀದಿ ಪ್ರಕ್ರಿಯೆಯನ್ನು 2020ನೇ ಸಾಲಿನ ಜನವರಿ 1 ರಿಂದ ಮಾರ್ಚ್‌ ತಿಂಗಳಾಂತ್ಯದವರಿಗೂ ನಡೆಸಲಾಗುತ್ತಿದ್ದು, ರೈತರು ಡಿ.26 ರಿಂದ ಜ.10 ರವರೆಗೂ ಕನಿಷ್ಠ ಬೆಂಬಲ ಬೆಲೆ ಕೇಂದ್ರಗಳಿಗೆ ಧಾವಿಸಿ ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಿದರು.

ಕೇಂದ್ರಗಳಲ್ಲಿ ನೋಂದಣಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ರಾಗಿ ಹಾಗೂ ಮುಸುಕಿನಜೋಳ ಬೆಳೆಗಳು ಸಮೃದ್ಧಿವಾಗಿದ್ದು, ರಾಗಿ ಹಾಗೂ ಮುಸುಕಿನಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡಲು ನಿರ್ಧರಿಸಲಾಗಿದೆ. ರಾಗಿ ಹಾಗೂ ಮುಸುಕಿನಜೋಳ ಬೆಳೆದ ಬೆಳೆಗಾರರು ಡಿ.26 ರಿಂದ 2020ನೇ ಸಾಲಿನ ಜನವರಿ 10 ರವರೆಗೂ ಕನಿಷ್ಠ ಬೆಂಬಲ ಬೆಲೆ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ.

ಇಲಾಖೆಯ ಗ್ರೇಡರ್‌ಗಳ ನೇಮಕ: ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿ ತಾಲೂಕು ಕೇಂದ್ರಗಳ ಕೆಎಸ್‌ಸಿಎಸ್‌ಸಿ ಸಗಟು ಮಳಿಗೆಗಳಲ್ಲಿ ಒಟ್ಟು 5 ನೋಂದಣಿಗಾಗಿ ಕೇಂದ್ರಗಳನ್ನು ತೆರೆಯಲಾಗುವುದು. ಪ್ರತಿ ಖರೀದಿ ಕೇಂದ್ರಕ್ಕೆ ಇಲಾಖೆಯ ಗ್ರೇಡರ್‌ಗಳನ್ನು ನೇಮಿಸಲಾಗುವುದು. ಪ್ರತಿ ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯ ಗ್ರೇಡರ್‌ಗಳೊಂದಿಗೆ ಆಹಾರ ಧಾನ್ಯಗಳ ಗುಣಮಟ್ಟ ದೃಢೀಕರಿಸಲಾಗುತ್ತದೆ.

Advertisement

ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಗರಿಷ್ಠ 75 ಕ್ವಿಂಟಲ್‌ ರಾಗಿ ಹಾಗೂ 75 ಕ್ವಿಂಟಲ್‌ ಮುಸುಕಿನ ಜೋಳ ಪ್ರತಿ ಎಕರೆಗೆ 15 ಕ್ವಿಂಟಲ್‌ನಂತೆ ಖರೀದಿಸಲಾಗುತ್ತದೆ. ಕನಿಷ್ಠ ಬೆಂಬಲ ಬೆಲೆ ಕೇಂದ್ರಗಳಲ್ಲಿ ನೋಂದಣಿ ಮಾಡಿಸಲು ರೈತರು ಆಧಾರ್‌ಕಾರ್ಡ್‌ ಪ್ರತಿ, ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ ಹಾಗೂ ಪಹಣಿ ಪ್ರತಿಯನ್ನು ನೀಡಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕ ಹೆಚ್‌.ಸೋಮಶಂಕರಪ್ಪ, ಕೃಷಿ ಇಲಾಖೆಯ ಜಂಟಿ ಉಪ ನಿರ್ದೇಶಕಿ ಅನುರೂಪ, ಜಿ.ಎಫ್.ಸಿ.ಎಸ್‌.ಸಿ. ಜಿಲ್ಲಾ ವ್ಯವಸ್ಥಾಪಕರಾದ ಸದಾಶಿವ. ಜಿ.ಭಂಡಾರೆ ಸೇರಿದಂತೆ ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ?: ಕೇಂದ್ರ ಸರ್ಕಾರವು ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಭತ್ತ, ರಾಗಿ ಮತ್ತು ಬಿಳಿಜೋಳ ಆಹಾರಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಂಬಲ ಬೆಲೆ ನೀಡುವುದಕ್ಕೆ ನಿರ್ಧರಿಸಿದ್ದು, ಭತ್ತ(ಸಾಮಾನ್ಯ) ಪ್ರತಿ ಕ್ವಿಂಟಲ್‌ಗೆ 1815 ರೂ. ಭತ್ತ (ಗ್ರೇಡ್‌-ಎ), 1835 -ರೂ. ಬಿಳಿಜೋಳ (ಹೈಬ್ರಿಡ್‌) 2,550 ರೂ., ಬಿಳಿ ಜೋಳ-ಮಾಲ್ದಂಡಿ 2,570 ಹಾಗೂ ರಾಗಿ ಗೆ 3,150 ರೂ. ಬೆಂಬಲ ಬೆಲೆ ನೀಡಲು ನಿಗದಿ ಮಾಡಿದೆ. ಅದರಂತೆ ರೈತರು ಯೋಜನೆಯ ಸದುಪಯೋಗ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next