ಕೊಪ್ಪಳ: ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಉಲ್ಭಣಿಸುವ ಸಾಧ್ಯತೆಯಿದೆ. ಆದರೆ ಕೊಪ್ಪಳದಲ್ಲಿ 21 ಕಿ.ಮೀ. ಹಿರೇಹಳ್ಳ ಸ್ವಚ್ಛ ಮಾಡುವ ಮೂಲಕ ಜಲ ಸಂರಕ್ಷಣೆಗೆ ಮುಂದಾಗಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಗವಿಸಿದ್ದೇಶ್ವರ ಸ್ವಾಮೀಜಿಗಳ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈ. ತುಕಾರಾಂ ಹೇಳಿದರು.
ನಗರದ ಹೊರ ವಲಯದ ಹಿರೇಹಳ್ಳದ ಸ್ವಚ್ಛತಾ ಸ್ಥಳಕ್ಕೆ ಭೇಟಿ ನೀಡಿ ಗವಿಸಿದ್ದೇಶ್ವರ ಸ್ವಾಮೀಜಿಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಮಹಾನ್ ಕಾರ್ಯ ಮಾಡಿದ್ದಾರೆ. ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನೂ ಊಹಿಸಲೂ ಸಾಧ್ಯವಾಗದಂತಾಗಲಿದೆ. ಜಲ ಸಂರಕ್ಷಣೆಗೆ ಕೊಪ್ಪಳದಲ್ಲಿ ಜಾಗೃತಿ ನಡೆದಿದೆ. ರಾಜ್ಯದಲ್ಲಿನ ಜಲ ಮೂಲಗಳ ರಕ್ಷಣೆ ಮಾಡುವ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು ಎಂದರು.
ಭವಿಷ್ಯದಲ್ಲಿ ಬಂಗಾರ ಸಿಗಬಹುದು. ಆದರೆ ಅನ್ನ-ನೀರು ಸಿಗುವುದು ಕಷ್ಟ. ನೀರಿನ ಮಹತ್ವದ ಬಗ್ಗೆ ಜನತೆ ಈಗಿನಿಂದಲೇ ಅರಿತುಕೊಳ್ಳಬೇಕಿದೆ. ಬರದ ಪರಿಸ್ಥಿತಿ ನಿವಾರಣೆಗೆ ಪ್ರತಿಯೊಬ್ಬರೂ ದೃಢ ಸಂಕಲ್ಪ ಮಾಡಬೇಕಿದೆ. ಜಲ ಸಂರಕ್ಷಣೆಗೆ ಕೈ ಜೋಡಿಸಬೇಕಿದೆ. ನಿಮ್ಮ ಸುತ್ತಲಿನ ಪ್ರದೇಶದ ಜಲಮೂಲ ಸಂರಕ್ಷಣೆ ಮಾಡಿಕೊಂಡರೆ ಭವಿಷ್ಯದಲ್ಲಿ ನೀರಿನ ಸಮಸ್ಯೆ ಉದ್ಭವಿಸಲ್ಲ. ಕೊಪ್ಪಳದ ಸುತ್ತಲೂ ಹಿರೇಹಳ್ಳದ ಸ್ವಚ್ಛತಾ ಕಾರ್ಯ ನಡೆದಿರುವುದು ಖುಷಿಯ ವಿಚಾರ ಎಂದರು. ಸಂಸದೀಯ ಕಾರ್ಯದರ್ಶಿ ರಾಘವೇಂದ್ರ ಹಿಟ್ನಾಳ ಅವರು ಜಲ ಸಂರಕ್ಷಣೆಗೆ ಕೈ ಜೋಡಿಸಿದ್ದು ಹಿರೇಹಳ್ಳ ವ್ಯಾಪ್ತಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 33 ಕೋಟಿ ರೂ. ಅನುದಾನ ಕೊಡಿಸಿರುವುದು ನಿಜಕ್ಕೂ ಸಂತಸದ ವಿಚಾರ. ಜಿಲ್ಲಾಡಳಿತ, ಸಾರ್ವಜನಿಕರು ಸೇತುವೆ ನಿರ್ಮಾಣಕ್ಕೆ, ಕೆರೆ ಹೂಳೆತ್ತುವ ಕಾರ್ಯಕ್ಕೆ ಕೈ ಜೋಡಿಸಿರುವುದು ಶ್ಲಾಘನೀಯ. ಇಲ್ಲಿನ ಜಲ ಸಂರಕ್ಷಣೆಯ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ನಡೆಸುವೆ. ರಾಜ್ಯಾದ್ಯಂತ ಇದೇ ಮಾದರಿಯಲ್ಲಿ ಜಲಮೂಲಗಳ ಸಂರಕ್ಷಣೆಗೆ ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಸುನೀಲ್ ಕುಮಾರ, ಮುಖಂಡರಾದ ಕಾಟನ್ ಪಾಷಾ, ಗಾಳೆಪ್ಪ ಪೂಜಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.