Advertisement

ಋತುಸ್ರಾವದಬಗ್ಗೆ ಹೆಣ್ಣು ಮಕ್ಕಳಲ್ಲಿಹೆಚ್ಚಿನಜಾಗೃತಿ ಮೂಡಿಸಿ:ಮೀನಾಕ್ಷಿ

12:33 PM Jun 23, 2018 | Team Udayavani |

ಮಹಾನಗರ: ಹೆಣ್ಣುಮಕ್ಕಳು ಹದಿಹರೆಯಕ್ಕೆ ಕಾಲಿಡುವ ವೇಳೆ ಅವರ ದೈಹಿಕ ಬದಲಾವಣೆ ಕೆಲವೊಮ್ಮೆ ಮಾನಸಿಕ ಖನ್ನತೆಗೂ ಕಾರಣವಾಗುತ್ತದೆ. ಈ ಬಗ್ಗೆ ಜಾಗೃತಿ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.

Advertisement

ಜಿಲ್ಲಾ ಪಂಚಾಯತ್‌, ಸ್ವಚ್ಛ ಭಾರತ್‌ ಮಿಷನ್‌, ಜಿಲ್ಲಾ ನೆರವು ಘಟಕದ ವತಿಯಿಂದ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ‘ಸ್ವಚ್ಛ  ಗೆಳತಿ- ಋತುಸ್ರಾವ ಜಾಗೃತಿ ಅಭಿಯಾನ ಮತ್ತು ತ್ಯಾಜ್ಯ ನಿರ್ವಹಣೆ’ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಋತುಸ್ರಾವ ಸಂದರ್ಭ ಬಳಸುವ ಪ್ಯಾಡ್‌ಗಳ ನಿರ್ವಹಣೆ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಋತುಸ್ರಾವ ಸಂದರ್ಭ ಸ್ವಚ್ಛತೆಗೆ ನೀಡಬೇಕಾದ ಪ್ರಾಮುಖ್ಯ ಹಾಗೂ ತ್ಯಾಜ್ಯ ನಿರ್ವಹಣೆಗಾಗಿ ಜಿ.ಪಂ. ವತಿಯಿಂದ ಸ್ವತ್ಛ ಗೆಳತಿ ಅಭಿಯಾನ ನಡೆಸಲಾಗುತ್ತಿದೆ. ಇದರ ಸಮರ್ಪಕ ಅನುಷ್ಠಾನ ಹೆಣ್ಣು ಮಕ್ಕಳಿಗೆ ಸಹಕಾರಿಯಾಗಲಿದೆ ಎಂದರು.

ನ್ಯಾಪ್‌ಕಿನ್‌ಗಳ ವಿಲೇವಾರಿ
ಜಿ.ಪಂ. ಸಿಇಒ ಡಾ| ಎಂ.ಆರ್‌. ರವಿ ಮಾತನಾಡಿ, ಋತುಸ್ರಾವದ ಸಂದರ್ಭ ಬಳಸಲಾಗುವ ಪ್ಯಾಡ್‌ ಅಥವಾ ನ್ಯಾಪ್‌ಕಿನ್‌ಗಳ ಪೈಕಿ ಜಿಲ್ಲೆಯಲ್ಲಿ ಶೇ. 18.55ರಷ್ಟು ಮಣ್ಣಿನಲ್ಲಿ ಹೂಳಲಾಗುತ್ತದೆ. ಶೇ. 24.84ರಷ್ಟು ತ್ಯಾಜ್ಯ ವಿಲೇವಾರಿ ವಾಹನಕ್ಕೆ ಹಾಕಲಾಗುತ್ತದೆ. ಶೇ. 14.03 ಶೌಚಾಲಯದ ಗುಂಡಿಗೆ ಹಾಕಲಾಗುತ್ತದೆ. ಶೇ. 29.52ರಷ್ಟು ಮಂದಿ ಬಚ್ಚಲು ಮನೆಯ ಒಲೆಯಲ್ಲಿ ಸುಡುತ್ತಾರೆ. ಶೇ. 13.01ರಷ್ಟು ಮಂದಿ ತೋಡು ಅಥವಾ ರಸ್ತೆ ಬದಿಗಳಲ್ಲಿ ಎಸೆಯುತ್ತಾರೆ. ಇವೆಲ್ಲವೂ ತ್ಯಾಜ್ಯ ನಿರ್ವಹಣೆಯ ವೈಜ್ಞಾನಿಕ ವಿಧಾನವಲ್ಲ. ಸುಡುವುದು ಮತ್ತು ಹೂಳುವುದನ್ನು ಸದ್ಯದ ಮಟ್ಟಿಗೆ ಪ್ರಸ್ತುತವೆನ್ನಲಾಗುತ್ತಿದೆ. ಸುಡಲು ಬಳಸಲಾಗುವ ಇನ್ಸಿನೆರೇಟರ್‌ಗಳು ದುಬಾರಿಯಾಗಿದೆ. ಜಿಲ್ಲೆಯಲ್ಲಿ 140 ಶಾಲೆಗಳಿಗೆ ಈ ಇನ್ಸಿನೆರೇಟರ್‌ಗಳನ್ನು ಒದಗಿಸಲಾಗಿದೆ. ಮನೆಗಳಲ್ಲಿ ಈ ವ್ಯವಸ್ಥೆಗೆ ಸರಕಾರ ಸಬ್ಸಿಡಿ ಮೂಲಕ ವ್ಯವಸ್ಥೆ ಕಲ್ಪಿಸಿದರೆ ಉತ್ತಮ ಎಂದು ಅವರು ಹೇಳಿದರು.

ಮಾಹಿತಿ ಕೈಪಿಡಿ ಬಿಡುಗಡೆ
ಜಿ.ಪಂ. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮಾನಾಥ ಶೆಟ್ಟಿ ಸ್ವಚ್ಛ  ಗೆಳತಿ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿದರು. ಜಿ.ಪಂ. ಸದಸ್ಯರಾದ ಸುಚರಿತ ಶೆಟ್ಟಿ, ವಿನೋದ್‌ ಬೊಳ್ಳೂರು, ಮಮತಾ ಗಟ್ಟಿ, ಮಂಜುಳಾ ಮಾವೆ, ಶಾಹುಲ್‌ ಹಮೀದ್‌ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ರಮೀಳಾ ಶೇಖರ್‌, ಡಾ| ಪೂರ್ಣಿಮಾ ಭಟ್‌, ಡಾ| ಶ್ರೀನಿವಾಸ್‌ ಭಟ್‌ ತರಬೇತಿ ನೀಡಿದರು. ಜಿ.ಪಂ.ನ ಉಪ ಕಾರ್ಯದರ್ಶಿ ಎಂ.ವಿ. ನಾಯಕ್‌ ಸ್ವಾಗತಿಸಿದರು.

Advertisement

ಪ್ರಮಾಣಪತ್ರ ವಿತರಣೆ
ಅಭಿಯಾನ ಅಂಗವಾಗಿ ಆಯೋಜಿಸಲಾದ ಸ್ವಚ್ಛತಾ ಘೋಷಣಾ ಸ್ಪರ್ಧೆ ಹಾಗೂ ಸ್ವಚ್ಛತಾ ಗೀತ ರಚನೆ ಮತ್ತು ಗಾಯನ ಸ್ಪರ್ಧೆಯ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಎನ್ನೆಸ್ಸೆಸ್‌ ಕಾರ್ಯಕರ್ತರಿಂದ ಜಾಗೃತಿ
ಅಭಿಯಾನ ಬಗ್ಗೆ ಮಾಹಿತಿ ನೀಡಿದ ಜಿ.ಪಂ. ಸಿಇಒ ಡಾ| ಎಂ.ಆರ್‌. ರವಿ, ಜಿಲ್ಲೆಯ ಶಾಲೆಗಳಲ್ಲಿ ಜುಲೈ ತಿಂಗಳಿನಿಂದ ವಿದ್ಯಾರ್ಥಿನಿಯರಿಗೆ ಋತುಸ್ರಾವ ಸಂದರ್ಭದ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಅಭಿಯಾನ 10 ತಿಂಗಳ ಕಾಲ ನಡೆಯಲಿದೆ. 6 ಮತ್ತು 7ನೇ ತರಗತಿಯ ಜಿಲ್ಲೆಯ 1,182 ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ 30,734 ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿ ಈ ಅಭಿಯಾನ ನಡೆಯಲಿದೆ. ಈ ಮಕ್ಕಳನ್ನು 10 ರಿಂದ 25 ಮಕ್ಕಳ ತಂಡಗಳಾಗಿಸಿ ಒಟ್ಟು 1,604 ತಂಡಗಳಿಗೆ ಅಷ್ಟೇ ಸಂಖ್ಯೆಯ ಎನ್ನೆಸ್ಸೆಸ್‌ ಕಾರ್ಯಕರ್ತರಿಂದ ಆಪ್ತ ಸಮಾಲೋಚನೆಯ ಮೂಲಕ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next