ನೆಲಮಂಗಲ: ಪುಣ್ಯಕೋಟಿ ಹಸು ದತ್ತು ಸ್ವೀಕಾರ ಯೋಜನೆಯನ್ನು ಸಿಎಂ ಜಾರಿಗೊಳಿ ಸಿದ್ದು, ಚಿತ್ರನಟ ಸುದೀಪ್ 31 ಹಸು ದತ್ತು ತೆಗೆದುಕೊಂಡಿದ್ದಾರೆ. ಅದರಂತೆ ರಾಜ್ಯದ ಸಚಿವರು, ಶಾಸಕರು ಹಸುಗಳನ್ನು ದತ್ತು ಸ್ವೀಕಾರ ಮಾಡಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಸಲಹೆ ನೀಡಿದರು.
ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕೊಡಿಗೇಹಳ್ಳಿಯಲ್ಲಿ ಜಿಲ್ಲೆಗೊಂದು ಗೋಶಾಲೆ ಪ್ರಾರಂಭಿಸುವ ಕಾರ್ಯಕ್ರಮದಡಿ ಸ್ಥಾಪಿಸಿರುವ ಜಿಲ್ಲಾಮಟ್ಟದ ಸರ್ಕಾರಿ ಗೋಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಪ್ರಧಾನವಾಗಿರುವ ಭಾರತ ದೇಶದಲ್ಲಿ ಹಸುಗಳಿಗೆ ಮಹತ್ವದ ಸ್ಥಾನಮಾನವಿದೆ. ಪ್ರಧಾನಿ ಮೋದಿ, ಬಿ.ಎಸ್ .ಯಡಿಯೂರಪ್ಪರ ಆಸೆಯಿಂದ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೊಂಡಿದೆ. ಇದರಿಂದ ರಾಜ್ಯದಲ್ಲಿ 30 ಸಾವಿರಕ್ಕೂ ಅಧಿಕ ಹಸುಗಳ ರಕ್ಷಣೆ ಮಾಡಲಾಗಿದೆ ಎಂದರು.
ಸಚಿವ ಸುಧಾಕರ್ ಮತ್ತು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಕೂಡ ಹಸು ದತ್ತು ಪಡೆದು ಯೋಜನೆಗೆ ಕೈಜೋಡಿಸಬೇಕು. ಜಾನುವಾರುಗಳ ಚರ್ಮಗಂಟು ಕಾಯಿಲೆ ನಿಯಂತ್ರಣ ಹಾಗೂ ನಿವಾರಣೆಗೆ ತ್ವರಿತ ಕ್ರಮವಹಿಸಲು ಸಿಎಂ 13 ಕೋಟಿ ರೂ.ಹಣಕಾಸು ಬಿಡುಗಡೆ ಮಾಡಿದ್ದಾರೆ ಎಂದರು.
ಹೈನುಗಾರಿಕೆಗೆ ಉತ್ತೇಜನ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಜಾನು ವಾರುಗಳ ಒಡನಾಟದಿಂದ ದಯೆ, ಪ್ರೀತಿ, ವಿಶ್ವಾಸ, ಮಾನವೀಯ ಗುಣಗಳ ಬೆಳೆವಣಿಗೆ ಯಾಗುತ್ತದೆ. ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆಯಾಗುತ್ತಿವೆ. ಜಾನುವಾರು ಗಳ ಆರೋಗ್ಯ ಸಂರಕ್ಷಣೆ ಹಾಗೂ ಹೈನುಗಾರಿಕೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದರು.
ಗುಣಮಟ್ಟ ಕಾಯ್ದುಕೊಳ್ಳಿ: ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ಎಲ್ಲಾ ಗೋಶಾಲೆ ನಿರ್ಮಾಣಕ್ಕೆ ಒಂದೇ ಮಾದರಿಯ ವಿನ್ಯಾಸ ರೂಪಿಸಿಕೊಳ್ಳಬೇಕು. ಬೇರೆ ಬೇರೆ ಮಾದರಿಯ ವಿನ್ಯಾಸಗಳಿಗೆ ಅವಕಾಶ ನೀಡಬಾರದು. ಗುಣಮಟ್ಟ ಕಳಪೆಯಾಗ ದಂತೆ ನಿಗಾವಹಿಸ ಬೇಕು. ಹಸುಗಳ ಮಲಗುವ ನೆಲ ಹಾಸಿಗೆ ಕಲ್ಲುಗಳನ್ನು ಬಳಸಿ, ಸಿಮೆಂಟ್ ಹಾಕಬೇಡಿ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತೆ ಎಸ್. ಅಶ್ವತಿ ಮತ್ತು ಅಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಸೂಚಿಸಿದರು.
ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ, ಮಾಜಿ ಶಾಸಕ ನಾಗರಾಜು, ಎನ್‌ಪಿಎ ಅಧ್ಯಕ್ಷ ಎಸ್. ಮಲ್ಲಯ್ಯ, ಬಿಎಂಟಿಸಿ ನಿರ್ದೇಶಕ ಭೃಂಗೀಶ, ಕೊಡಿಗೇಹಳ್ಳಿ ಗ್ರಾಪಂ ಅಧ್ಯಕ್ಷೆ ಕೆ.ಆರ್.ಗಂಗಮ್ಮ ಚನ್ನೇಗೌಡ, ಉಪಾಧ್ಯಕ್ಷ ಎ.ಎಚ್. ಅಂಜನಮೂರ್ತಿ, ಎಸ್.ಅಶ್ವತಿ, ಡಾ.ಮಂಜುನಾಥ ಎಸ್.ಪಾಳೇಗಾರ, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಕೆ. ರೇವಣಪ್ಪ, ಉಪವಿಭಾಗಾಧಿಕಾರಿ ತೇಜಸ್ ಕುಮಾರ, ತಹಶೀಲ್ದಾರ್ ಮಂಜುನಾಥ, ಡಾ. ಜಿ.ಎಂ. ನಾಗರಾಜ, ಸಹಾಯಕ ನಿರ್ದೇಶಕ ಡಾ.ಸಿದ್ದಪ್ಪ, ಬಿಜೆಪಿ ಜಿಲ್ಲಾಉಪಾಧ್ಯಕ್ಷ ಹೊಂಬಯ್ಯ, ಮುಖಂಡ ಶಶಿಧರ್, ಗಿರೀಶ್, ಡಾ.ಎಚ್.ಎಂ. ಶಿವಪ್ರಸಾದ್ ಇದ್ದರು.