ಮೂಡಬಿದಿರೆ: ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆ ಹಾಗೂ ಮೂಡಬಿದಿರೆಯ ರೋಟರಿ ಪ.ಪೂ. ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನ. 7 ಮತ್ತು 8ರಂದು ನಡೆದ ಪದವಿಪೂರ್ವ ಕಾಲೇಜುಗಳ ಆ್ಯತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ಗ್ರಾಮಾಂತರವನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜು ಒಟ್ಟು 40 ವಿಭಾಗಗಳಲ್ಲಿ 31 ಚಿನ್ನ, 25 ಬೆಳ್ಳಿ ಮತ್ತು 8 ಕಂಚಿನ ಪದಕಗಳೊಂದಿಗೆ ಒಟ್ಟು 240 ಅಂಕದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆಯಿತು.
ಬಾಲಕರ ವಿಭಾಗದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ಆಶೀಸ್ ಬಲೋಟಿಯಾ, ಎಚ್.ಎನ್. ಶಂಕರಪ್ಪ ಹಾಗೂ ಸಂತ ಅಲೋಶಿಯಸ್ ಪ.ಪೂ. ಕಾಲೇಜಿನ ರೋಹನ್, ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ನ ಜ್ಯೋತ್ಸ್ನಾ , ಅನಿತಾ ವಿ.ಎಸ್. ಹಾಗೂ ಪ್ರಿಯಾ ಎಲ್.ಡಿ. ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು. ದ್ವಿತೀಯ ಪ್ರಶಸ್ತಿಯನ್ನು ಮಂಗಳೂರು ನಗರವನ್ನು ಪ್ರತಿನಿಧಿಸಿ, 69 ಅಂಕ ಗಳಿಸಿದ ಸಂತ ಅಲೋಶಿಯಸ್ ಪ.ಪೂ. ಕಾಲೇಜು ತಂಡ ಪಡೆಯಿತು.
ರೋಟರಿ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ನಾರಾಯಣ ಪಿ. ಎಂ. ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನೋಟರಿ ಅಡ್ವೊಕೇಟ್ ಶ್ವೇತಾ ಜೈನ್ ಬಹುಮಾನ ವಿತರಿಸಿದರು.
ಪ.ಪೂ. ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ, ಜಿಲ್ಲಾ ಪ.ಪೂ. ದೈ.ಶಿ. ನಿರ್ದೇಶಕರ ಸಂಘದ ಅಧ್ಯಕ್ಷ ಅಲ್ವಿನ್ ಮಿರಾಂಡ , ರೋಟರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ವಿನ್ಸೆಂಟ್ ಡಿ’ಕೋಸ್ಟಾ, ದೈ.ಶಿ.ನಿ. ಸುಧೀರ್, ಪ್ರಕಾಶ್ ಹೆಗ್ಡೆ, ರೋಟರಿ ಹೈಸ್ಕೂಲು ಮುಖ್ಯಶಿಕ್ಷಕ ಗಜಾನನ ಮರಾಠೆ ಉಪಸ್ಥಿತರಿದ್ದರು. ನವೀನ್ ಅಂಬೂರಿ ನಿರೂಪಿಸಿದರು.
ಆಳ್ವಾಸ್‌ನಿಂದ 50 ಮಂದಿ ರಾಜ್ಯಮಟ್ಟಕ್ಕೆ
ನ. 11 ರಿಂದ 13ರವರೆಗೆ ಬ್ರಹ್ಮಾವರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಆ್ಯತ್ಲೆಟಿಕ್ಸ್ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡದಿಂದ
ಆಯ್ಕೆಯಾದ 68 ಕ್ರೀಡಾಪಟುಗಳಲ್ಲಿ 50 ಕ್ರೀಡಾಪಟುಗಳು ಆಳ್ವಾಸ್ ಪ.ಪೂ. ಕಾಲೇಜಿನವರಾಗಿದ್ದಾರೆ.