Advertisement

ಸಾಕ್ಷರತಾ ಆಂದೋಲನದಿಂದ ಅಕ್ಷರ ಜ್ಞಾನ

03:05 PM Dec 20, 2018 | |

ಪುತ್ತೂರು: ರಾಜ್ಯದಲ್ಲಿ ಶಿಕ್ಷಣ ಪಡೆಯದ ಸಾವಿರಾರು ಮಂದಿಗೆ ಸಾಕ್ಷರತಾ ಆಂದೋಲನದ ಮೂಲಕ ಅಕ್ಷರ ಜ್ಞಾನ ಕಲಿಸಲಾಗಿದೆ. ಈ ನಿಟ್ಟಿನಲ್ಲಿ ಕೈಜೋಡಿಸಿದವರೆಲ್ಲರೂ ಅಭಿನಂದನಾರ್ಹರು ಎಂದು ಜಿ.ಪಂ. ಸಿಇಒ ಡಾ| ಸೆಲ್ವಮಣಿ ಹೇಳಿದರು.

Advertisement

ಮಾದರಿ ಗ್ರಾಮಾಭಿವೃದ್ಧಿ ಆಂದೋಲನ, ಬೀರಿಗ ಮಾದರಿ ಗ್ರಾಮ ವಿಕಾಸ ಕೇಂದ್ರ, ಬನ್ನೂರು ಗ್ರಾ.ಪಂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜನ ಶಿಕ್ಷಣ ಟ್ರಸ್ಟ್‌, ಸ್ವಸಹಾಯ ಸಂಘಗಳ ಒಕ್ಕೂಟ, ಮಹಾವಿಷ್ಣು ಯುವಕ ಮಂಡಲ, ಹಿರಿಯ ವಿದ್ಯಾರ್ಥಿಗಳ ಸಂಘ, ಬಾಲವಿಕಾಸ ಸಮಿತಿ ಹಾಗೂ ಬೀರಿಗ ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ನವಸಾಕ್ಷರರ ಸಂಘಟನೆಯ 27ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಅಕ್ಷರೋತ್ಸವ ಹಾಗೂ ಬಾಲಮೇಳ-2018 ಕಾರ್ಯಕ್ರಮದಲ್ಲಿ ಮಾತನಾಡಿದರು. 

ತಪ್ಪು ಕಲ್ಪನೆ
ಅಂಗನವಾಡಿಗೆ ಮಕ್ಕಳು ಬರುವುದಿಲ್ಲ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ. ಬೀರಿಗದಂತಹ ಕುಗ್ರಾಮದಲ್ಲಿನ ಅಂಗನವಾಡಿಗಳಲ್ಲಿ ಸುಮಾರು 27 ಮಂದಿ ಪುಟಾಣಿಗಳನ್ನು ಹೆತ್ತವರ ಮನವೊಲಿಸಿ ಕರೆತಂದು ಅಕ್ಷರ ಪ್ರೀತಿಯನ್ನು ಬಿತ್ತಿದ ಅಂಗನವಾಡಿ ಕಾರ್ಯಕರ್ತೆ ಅರುಣಾ ಅವರ ಕಾರ್ಯ ಶ್ಲಾಘನೀಯ. ಒಟ್ಟಾರೆಯಾಗಿ ಸಮುದಾಯ ಚಳವಳಿಯನ್ನೇ ಅವರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾವಲಂಬಿ ಬದುಕು
ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಮಹಿಳೆಯರಲ್ಲಿ ಸ್ವಾವಲಂಬಿ ಬದುಕು ತುಂಬುವ ಕೆಲಸ ಬೀರಿಗದಲ್ಲಿ ನಡೆದಿದೆ. ಪ್ರತಿಯೊಂದು ಗ್ರಾಮಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣದ ಆಸ್ತಿಯನ್ನು ನೀಡಬೇಕು. ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳುವ ನಿಟ್ಟಿನಲ್ಲಿ ಪೋಷಕರ ಪ್ರಯತ್ನ ಸಾಗಬೇಕು ಎಂದರು.

ಜಿ.ಪಂ. ಸದಸ್ಯೆ ಶಯನಾ ಜಯಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಕ್ಕೂಟದ ಉಪನಿರ್ದೇಶಕ ಸುಂದರ ಪೂಜಾರಿ, ಸಿಡಿಪಿಒ ಶಾಂತಿ ಹೆಗಡೆ, ನಗರಸಭೆ ಮಾಜಿ ಸದಸ್ಯ ಮಹಮ್ಮದಾಲಿ, ಬನ್ನೂರು ಗ್ರಾ.ಪಂ. ಉಪಾಧ್ಯಕ್ಷ ಜಿನ್ನಪ್ಪ ಗೌಡ, ಸದಸ್ಯ ರತ್ನಾಕರ ಪ್ರಭು, ಅಣ್ಣಿ ಪೂಜಾರಿ, ಗಿರಿಜಾ, ಲತಾ, ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ, ಪಿಡಿಒ ಶಾಂತಾರಾಮ ನಾಯಕ್‌, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಪುಷ್ಪಲತಾ, ಮಾಜಿ ಒಂಬುಡ್ಸ್‌ಮನ್‌ ಶೀನ ಶೆಟ್ಟಿ ಶುಭ ಹಾರೈಸಿದರು.

Advertisement

ಸುಗ್ರಾಮ ಸಂಘದ ಒಕ್ಕೂಟದ ಅಧ್ಯಕ್ಷೆ ಜಯಾ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ನಿರ್ವಹಿಸಿದರು. ಅಂಗನವಾಡಿ ಪುಟಾಣಿಗಳು ಹಾಗೂ ಮಹಿಳೆಯರಿಂದ ನೃತ್ಯ ಪ್ರದರ್ಶನಗೊಂಡಿತು.

ಸಮ್ಮಾನ
ಬೀರಿಗ ಅಂಗನವಾಡಿ ಪುಟಾಣಿಗಳು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಬೀರಿಗ ಅಂಗನವಾಡಿ ಕೇಂದ್ರದಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮುತ್ತಮ್ಮ ಅವರನ್ನು ಚಿನ್ನದ ಉಂಗುರ ತೊಡಿಸಿ ಸಮ್ಮಾನಿಸಲಾಯಿತು.

ಸಾಕ್ಷರತೆಯ ದೀಪ ಹಚ್ಚಿದೆ
ಶಾಲಾ ಮೆಟ್ಟಿಲು ಹತ್ತದ ನಾನು ಸಾಕ್ಷರತಾ ಆಂದೋಲನದ ಮೂಲಕ ಅಕ್ಷರ ಕಲಿತೆ. ಪರಿಣಾಮ ಸುಮಾರು 200 ಮನೆಗಳಿಗೆ ಸಾಕ್ಷರತೆಯ ದೀಪವನ್ನು ಹಚ್ಚುವ ಕೆಲಸ ಮಾಡಿದ್ದೇನೆ. ಹೆಣ್ಣು ಮಕ್ಕಳು ಕಲಿತರೆ ಏನನ್ನೂ ಮಾಡಲು ಸಾಧ್ಯ. ಅದಕ್ಕೆ ಉದಾಹರಣೆ ನಾನು.
-ಯಶೋದಾ ಲಾೖಲ,
ನವಸಾಕ್ಷರೆ

Advertisement

Udayavani is now on Telegram. Click here to join our channel and stay updated with the latest news.

Next