Advertisement

ಕೋವಿಡ್ ಸವಾಲಿನ ಸಮರ್ಥ ನಿರ್ವಹಣೆ; ಮನುಕುಲಕ್ಕೇ ಜಯ: ಜಿಲ್ಲಾಧಿಕಾರಿ ಜಿ. ಜಗದೀಶ್

11:30 PM Aug 15, 2020 | mahesh |

ಉಡುಪಿ: ದೇಶ, ಜಾತಿ, ಜನಾಂಗ, ಭಾಷೆಯನ್ನು ಮೀರಿ ಸಂಶೋಧನೆ ನಿರತರಾಗಿರುವ ಆಧುನಿಕ ಕೋವಿಡ್ ಹೋರಾಟಗಾರರ ಸೇವೆ ಶ್ಲಾಘನೀಯ. ಇಂತಹ ಸಂದಿಗ್ಧ ಕಾಲದಲ್ಲಿ ಭಾರತದ ನಾಗರಿಕರಾದ ನಮ್ಮೆಲ್ಲರ ಅಮೂಲ್ಯ ಕರ್ತವ್ಯವೆಂದರೆ ಸರಕಾರದ ನೀತಿ ನಿಯಮಗಳನ್ನು ಅತೀ ವಿಧೇಯತೆಯಿಂದ ಪಾಲಿಸುವುದು. ಆಗ ಮನುಕುಲವೇ ಜಯ ಸಾಧಿಸುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

Advertisement

ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ಶೀಘ್ರ ಕಾಪು ಬಂದರು
ಹಲವು ವರ್ಷಗಳ ಬೇಡಿಕೆಯಾದ ಕಾಪು ಮೀನುಗಾರಿಕಾ ಬಂದರು ನಿರ್ಮಾಣವನ್ನು 180.84 ಕೋ.ರೂ. ವೆಚ್ಚದಲ್ಲಿ ಕೈಗೊಳ್ಳಲು ಸರಕಾರ ಅನುಮೋದಿಸಿದೆ. ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ ಎಂದರು.

ಕಾರ್ಕಳದಲ್ಲಿ ಜವುಳಿ ಪಾರ್ಕ್‌
ಯುವಸಮುದಾಯಕ್ಕೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಜವುಳಿ ಪಾರ್ಕ್‌ ನಿರ್ಮಿಸಲು ಸರಕಾರ ಅನುಮೋದನೆ ನೀಡಿದೆ. ಕಾರ್ಕಳದ ಕಸ್ಬಾ ಗ್ರಾಮದಲ್ಲಿ 1 ಕೋ.ರೂ. ವೆಚ್ಚದಲ್ಲಿ ಕೋಟಿ ಚೆನ್ನಯ ಥೀಂ ಪಾರ್ಕ್‌ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಅಂತಾರಾಷ್ಟ್ರೀಯ ಮಾನ್ಯತೆಗೆ ಯತ್ನ
ಜಿಲ್ಲೆಯ ಎಲ್ಲ ಬೀಚ್‌ಗಳಿಗೂ ಬ್ಲೂಫ್ಲ್ಯಾಗ್‌ ಮಾನ್ಯತೆ ದೊರೆಯುವ ರೀತಿಯಲ್ಲಿ ಬೀಚ್‌ಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನು ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು. ಬ್ಲೂಫ್ಲ್ಯಾಗ್‌ ಸರ್ಟಿಫಿಕೆಟ್‌ ಪ್ರಾಧಿಕಾರದ ಮಾನದಂಡದ ಪ್ರಕಾರ ಪಡುಬಿದ್ರಿಯ ಎಂಡ್‌ ಪಾಯಿಂಟ್‌ನಲ್ಲಿ ಎಲ್ಲ ಕಾಮಗಾರಿಗಳನ್ನು ಮುಗಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಬ್ಲೂಫ್ಲ್ಯಾಗ್‌ಮಾನ್ಯತೆಗಾಗಿ “ಅಂತಾರಾಷ್ಟ್ರೀಯ ಜ್ಯೂರಿ’ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

Advertisement

ಜೆಟ್ಟಿಗೆ ಅನುಮೋದನೆ
ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸೈಂಟ್‌ ಮೇರಿಸ್‌ ದ್ವೀಪದಲ್ಲಿ 4.2 ಕೋ.ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಾಣಕ್ಕೆ ಸರಕಾರದ ಅನುಮೋದನೆ ದೊರೆತಿದೆ. ಮಲ್ಪೆ ಸೀ ವಾಕ್‌ ಮತ್ತು ಬೀಚ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸುಂದರೀ ಕರಣ ಕಾರ್ಯಗಳಿಗೆ 2.50 ಕೋ.ರೂ.ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಶಾಸಕ ಕೆ. ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಡುಪಿ ತಾ.ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಎಸ್‌ಪಿ ಎನ್‌.ವಿಷ್ಣುವರ್ಧನ್‌, ಕರಾವಳಿ ಕಾವಲು ಪಡೆಯ ಎಸ್‌ಪಿ ಚೇತನ್‌, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌ ಉಪಸ್ಥಿತರಿದ್ದರು.

ಎಡಿಸಿ ಸದಾಶಿವ ಪ್ರಭು ಸ್ವಾಗತಿಸಿದರು. ಕ್ರೀಡಾ ಇಲಾಖೆಯ ರೋಶನ್‌ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ನಿರ್ವಹಿಸಿದರು.

ಕೋವಿಡ್ ವಾರಿಯರ್‌ಗಳಿಗೆ ಸಮ್ಮಾನ
ಪೊಲೀಸ್‌, ಅರಣ್ಯ ಇಲಾಖೆ, ಗೃಹರಕ್ಷಕದಳ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಕೊರೊನಾ ಸಂದರ್ಭ ಉತ್ತಮವಾಗಿ ಕಾರ್ಯನಿರ್ವಹಿಸಿದ 24 ಮಂದಿ ಕೊರೊನಾ ವಾರಿಯರ್‌ಗಳನ್ನು ಸಮ್ಮಾನಿಸಲಾಯಿತು. ಜಿ.ಪಂ. ವತಿಯಿಂದ ಸ್ವತ್ಛ ಭಾರತ್‌ ಮಿಷನ್‌ (ಗ್ರಾ)ನಲ್ಲಿ ಸಾಧಿಸಿರುವ ಪ್ರಗತಿ ಕುರಿತು ಕಿರು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕೋವಿಡ್‌-19ರ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next