ಸಾಗರ: ಕೆಳದಿ ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ಗುಂಡಾ ಜೋಯಿಸ್ ಅವರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆ ಗೊಂಡಿರುವುದು ಸಾಗರ ಕ್ಷೇತ್ರದ ಗರಿಮೆ ಹೆಚ್ಚಿಸಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಅಣಲೆಕೊಪ್ಪದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಡಾ. ಕೆಳದಿ ಗುಂಡಾ ಜೋಯಿಸ್ ಅವರನ್ನು ಅಧಿಕೃತವಾಗಿ ಆಹ್ವಾನಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಜೋಯಿಸ್ ಅವರು ಎಲೆಮರೆಯ ಕಾಯಿಯಂತೆ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದವರು. ಇತಿಹಾಸಕ್ಕೆ ಸಂಬಂಧಿಸಿದ ಸಾಕಷ್ಟು ಕ್ರತಿಗಳನ್ನು ಅವರು ಬರೆದಿದ್ದಾರೆ. ಅದರಲ್ಲಿಯೂ ಕೆಳದಿ ಇತಿಹಾಸ ಜನಮಾನಸದಲ್ಲಿ ನೆಲೆಯೂರುವಂತೆ ಮಾಡುವಲ್ಲಿ ಇವರ ಪಾತ್ರ ಪ್ರಮುಖವಾಗಿದ್ದು, ನಮ್ಮೂರಿನ ಜೋಯಿಸ್ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆ ಮಾಡಿರುವ ಪರಿಷತ್‌ಗೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಹ್ವಾನ ಸ್ವೀಕರಿಸಿ ಮಾತನಾಡಿದ ಗುಂಡಾ ಜೋಯಿಸ್, ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ನಾನು ಆಯ್ಕೆಯಾಗಿರುವುದು ಸಂತೋಷ ತಂದಿದೆ. ಈ ಸ್ಥಾನವು ಕೆಳದಿ ಇತಿಹಾಸಕ್ಕೆ ಸಂದ ಗೌರವವಾಗಿದೆ. ಕೆಳದಿ ಸಂಸ್ಥಾನವು ಮೈಸೂರು ಸಂಸ್ಥಾನಕ್ಕಿಂತ ನಾಲ್ಕುಪಟ್ಟು ದೊಡ್ಡದು. ಆದರೆ ಕೆಳದಿ ಇತಿಹಾಸವನ್ನು ಮರೆಮಾಚುವ ಕೆಲಸ ಲಾಗಾಯ್ತಿನಿಂದ ನಡೆದಿತ್ತು. ಇದೀಗ ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನನ್ನನ್ನು ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆ ಮಾಡಿದ್ದರಿಂದ ಇತಿಹಾಸ ತನ್ನ ಪುಟಗಳನ್ನು ಮತ್ತೆ ತೆರೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಹಾಯಕ ಆಯುಕ್ತ ಡಾ. ನಾಗರಾಜ್ ಎಲ್., ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಎನ್.ಲಲಿತಮ್ಮ, ಆರ್.ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ ಇನ್ನಿತರರು ಉಪಸ್ಥಿತರಿದ್ದರು. ಕುಗ್ವೆ ಕಲಾತಂಡ ಪ್ರಾರ್ಥಿಸಿದರು. ವಿ.ಟಿ.ಸ್ವಾಮಿ ಸ್ವಾಗತಿಸಿದರು. ಜಿ.ನಾಗೇಶ್ ವಂದಿಸಿದರು. ನಾರಾಯಣಮೂರ್ತಿ ನಿರೂಪಿಸಿದರು.