Advertisement

ಗುಣಮಟ್ಟದ ಶಿಕ್ಷಣದಿಂದ ಜಿಲ್ಲೆಗೆ ಪ್ರಥಮ ಸ್ಥಾನ

02:10 PM May 05, 2019 | Team Udayavani |

ಚನ್ನಪಟ್ಟಣ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯಗಳನ್ನು ನೀಡುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್‌ ತಿಳಿಸಿದರು.

Advertisement

ಕಾಲೇಜಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು ಸ್ಥಾಪನೆಯಾಗಿ 34 ವರ್ಷ ಕಳೆದಿದೆ. ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸುತ್ತಿದೆ. ಪ್ರತಿ ವರ್ಷ ನಮ್ಮ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ 2714 ಮಂದಿ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಪದವಿ ತರಗತಿಯಿಂದ ಆರಂಭ: ಬಿಎ, ಬಿಕಾಂ ಪದವಿ ತರಗತಿಯಿಂದ ಆರಂಭವಾದ ಕಾಲೇಜು ಬಿಎಸ್ಸಿ, ಬಿಬಿಎಂ ಪದವಿ ತರಗತಿಗಳ ಜತೆಗೆ ಸ್ನಾತಕೋತ್ತರ ಪದವಿ ತರಗತಿ ಹೊಂದಿದೆ. ತಾಲೂಕಿನ ವಿದ್ಯಾರ್ಥಿಗಳು ಅಷ್ಟೇ ಅಲ್ಲದೆ ಬಿಡದಿ, ಕನಕಪುರ, ಗಡಿಭಾಗ ನಿಡಘಟ್ಟ, ಮದ್ದೂರು, ಹಲಗೂರು, ಹುಲಿಯೂರು ದುರ್ಗ ಹೋಬಳಿಯ ಬಹುತೇಕ ಗ್ರಾಮಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ವಿವಿ ಮಟ್ಟದಲ್ಲಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ರವಿಚಂದ್ರ 6ನೇ ರ್‍ಯಾಂಕ್‌, ವಿಜ್ಞಾನ ವಿಭಾಗದಲ್ಲಿ ಮಮತಾ 8ನೇ ರ್‍ಯಾಂಕ್‌ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿ ಆಶಾ ಜೀವ ರಾಸಾಯನಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದು ಚಿನ್ನದ ಪದಕ ಪಡೆದಿದ್ದಾರೆ. ವಿದ್ಯಾರ್ಥಿನಿ ಸುಮ ದೆಹಲಿಯಲ್ಲಿ ನಡೆದ ಯುವ ಸಂಸತ್‌ ಕಾರ್ಯಕ್ರಮದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ನಡೆಸಿದ್ದಾರೆ. ವಿದ್ಯಾರ್ಥಿನಿ ಅನುಪ್ರಿಯಾ ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.

ಕಾಲೇಜಲ್ಲಿದೆ ಹತ್ತಾರು ಸೌಲಭ್ಯ: ಕಾಲೇಜು ನುರಿತ ಪ್ರಾಧ್ಯಾಪಕ ವರ್ಗ, ಸುಸಜ್ಜಿತ ಗ್ರಂಥಾಲಯ, ಸುಸಜ್ಜಿತ ಪ್ರಯೋಗಾಲಯ, ರಾಷ್ಟ್ರೀಯ ಸೇವಾ ಯೋಜನೆಯ ಎರಡು ಘಟಕಗಳು, ಉತ್ತಮ ಕ್ರೀಡಾ ಉಪಕರಣಗಳು, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ವಿದ್ಯಾರ್ಥಿನಿಯರಿಗಾಗಿ ವಿಶ್ರಾಂತಿ ಕೊಠಡಿ, ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಶುದ್ಧ ಕುಡಿಯುವ ನೀರಿನ ಘಟಕ ಹೀಗೆ ಹತ್ತಾರು ಸೌಲಭ್ಯಗಳನ್ನು ಹೊಂದಿದೆ ಎಂದು ಹೇಳಿದರು.

ಕಾಲೇಜಿಗೆ ಕೊಠಡಿಗಳ ಕೊರತೆ ಎದುರಾಗಿದ್ದ ಸಂದರ್ಭದಲ್ಲಿ ಅಂದಿನ ಶಾಸಕ ಸಿ.ಪಿ.ಯೋಗೇಶ್ವರ್‌ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿದ್ದರು. ಇದೀಗ ಕ್ಷೇತ್ರದ ಶಾಸಕ ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ 5 ಕೋಟಿ ರೂ. ಅನುದಾನದಿಂದ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

Advertisement

ಈ ವೇಳೆ ಸಹಪ್ರಾಧ್ಯಾಪಕರಾದ ಪ್ರೊ.ಮಾಯಿಗೇ ಗೌಡ, ಡಾ.ಮಧುಸೂದನಾಚಾರ್ಯ ಜೋಷಿ, ಡಾ.ಬಿ.ಟಿ.ನೇತ್ರವತಿ ಗೌಡ, ಡಾ.ಅಣ್ಣಯ್ಯ ತೈಲೂರು, ಡಾ.ಅನುರಾಧಾ, ಪ್ರೊ.ಭರತ್‌ ರಾಜು, ಪ್ರೊ.ಉಮೇಶ್‌, ಡಾ.ಮಾಧವಿ, ಜೆ.ನಾಗರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next