Advertisement

ಬಿಜೆಪಿ ಅಭ್ಯರ್ಥಿ ಗೆಲುವು ನಮ್ಮ ಗುರಿ

03:55 PM Apr 06, 2023 | Team Udayavani |

ಕೆಜಿಎಫ್‌: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೆಜಿಎಫ್‌ನಲ್ಲಿ ಗೆಲ್ಲುವುದು ನಮ್ಮ ಗುರಿಯಾಗಿದ್ದು, ಅದನ್ನು ಸಾಧಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

Advertisement

ನಗರದ ಅಂಬೇಡ್ಕರ್‌ ಮತ್ತು ತಿರುವಳ್ಳುವರ್‌ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಅಪಾರ ಬೆಂಬಲಿಗರೊಂದಿಗೆ ಪ್ರಸನ್ನ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿ, ಬೆಂಗಳೂರಿನ ವೇಲು ನಾಯಕರ್‌ ಕೆಜಿಎಫ್‌ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದು, ತಮ್ಮೊಟ್ಟಿಗೆ ಬಂದು ಪೂಜೆ ಸಲ್ಲಿಸುವಂತೆ ಆಹ್ವಾನ ನೀಡಿದ್ದಕ್ಕೆ ಅವರೊಂದಿಗೆ ಬಂದು ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು.

ಯಾರೇ ಅಭ್ಯರ್ಥಿಯಾದರೂ ಒಟ್ಟಾಗಿ ಕೆಲಸ: ಕೆಜಿಎಫ್‌ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಐದಾರು ಮಂದಿ ಆಕಾಂಕ್ಷಿಗಳಿದ್ದು, ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿದ್ದು, ಅವರ ಗತಿಯೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯು ರಾಷ್ಟ್ರೀಯ ಪಕ್ಷವಾಗಿದ್ದು, ಪಕ್ಷಕ್ಕಾಗಿ ಹಲವಾರು ಮಂದಿ ದುಡಿಯುತ್ತಿದ್ದರೂ ಸಹ ಅಭ್ಯರ್ಥಿ ಒಬ್ಬರೇ ಆಗುತ್ತಾರೆ. ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷರು, ಕಾರ್ಯಕರ್ತರು ಮತ್ತು ಜನರ ಅನುಮತಿ ಪಡೆದುಕೊಳ್ಳಲಾಗಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ಇಂದು ವೇಲು ನಾಯಕರ್‌ ಪೂಜೆ ಮಾಡೋಣ ಬನ್ನಿ ಎಂದು ಕರೆದರು, ಅವರೊಟ್ಟಿಗೆ ಬಂದಿದ್ದೇನೆ. ಯಾರೇ ನನ್ನನ್ನು ಕರೆದರೂ ಅವರೆಲ್ಲರೊಟ್ಟಿಗೆ ಬರುವುದಾಗಿ ತಿಳಿಸಿದರು.

ಇಲ್ಲಿ ಲೋಕಲ್‌, ಔಟ್‌ ಸೈಡ್‌ನ‌ವರು ಎನ್ನುವುದು ಗಣನೆಗೆ ಬರುವುದಿಲ್ಲ, ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಅಭ್ಯರ್ಥಿ ಯಾರೆಂಬುದನ್ನು ಪಕ್ಷ ತೀರ್ಮಾನಿಸುತ್ತದೆ. 9 ಜನ ಆಕಾಂಕ್ಷಿಗಳಿದ್ದರೂ ಒಬ್ಬರು ಅಭ್ಯರ್ಥಿಯಾಗುತ್ತಾರೆ, ಉಳಿದ 8 ಮಂದಿ ಒಬ್ಬ ವ್ಯಕ್ತಿಗೆ ಕೆಲಸ ಮಾಡುತ್ತಾರೆ ಎಂದರು.

Advertisement

ಗೆಲ್ಲುವಂತಹ ಅಭ್ಯರ್ಥಿ ಆಯ್ಕೆ: ಕೆಜಿಎಫ್‌ ನಲ್ಲಿ ಎಷ್ಟು ಜನ ಆಕಾಂಕ್ಷಿಗಳಿದ್ದಾರೋ ಅವರೆಲ್ಲರೂ ನಮ್ಮವರೇ, ಅದು ಸಂಪಂಗಿಯವರಾಗಲೀ, ಮೋಹನ್‌ಕೃಷ್ಣಾ ಆಗಲೀ ಎಲ್ಲರೂ ಒಂದೇ. ನಮ್ಮ ಉದ್ದೇಶ ಒಂದೇ ಆಕಾಂಕ್ಷಿಗಳೆಷ್ಟೇ ಜನ ಇದ್ದರೂ ಅಂತಿಮವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಒಬ್ಬರೇ ಆಗಿದ್ದು, ಅವರು ಗೆಲ್ಲುವವ ರಾಗಿರಬೇಕು. ಅಂತಹ ಅಭ್ಯರ್ಥಿಯನ್ನು ಪಕ್ಷವು ಆಯ್ಕೆ ಮಾಡಲಿದೆ ಎಂದರು.

ಕ್ಷೇತ್ರದಲ್ಲಿ ಅವಕಾಶ ಕೊಟ್ಟರೇ ಒಟ್ಟಾಗಿ ಕೆಲಸ ಮಾಡುವೆ: ಬಿಜೆಪಿ ನೂತನ ಟಿಕೆಟ್‌ ಆಕಾಂಕ್ಷಿ ವೇಲು ನಾಯಕರ್‌ ಮಾತನಾಡಿ, ಕಾರ್ಯಕರ್ತರ ಸೇವೆಯನ್ನು ಗುರುತಿಸುವ ಪಕ್ಷವೆಂದರೆ ಅದು ಬಿಜೆಪಿ ಪಕ್ಷವಾಗಿದ್ದು, ನಾನು ಪರಿಶಿಷ್ಟ ಜಾತಿಯ ಬಲ ಪಂಥೀಯ ಸಮುದಾಯಕ್ಕೆ ಸೇರಿದವನಾಗಿದ್ದು, ಬೆಂಗಳೂರಿನಲ್ಲಿ ಬಹುತೇಕ ಸಾಮಾನ್ಯ ವರ್ಗಕ್ಕೆ ಸೀಟುಗಳು ಮೀಸಲಾಗಿದ್ದು, ಬೆಂಗಳೂರಿನ ಸುತ್ತಮುತ್ತಲು ಮೀಸಲು ಕ್ಷೇತ್ರಗಳಲ್ಲಿ ಕೆಜಿಎಫ್‌ ನ್ನು ಆಯ್ಕೆ ಮಾಡಿಕೊಂಡಿದ್ದು, ಇಲ್ಲಿರುವ ಆಕಾಂಕ್ಷಿಗಳೊಂದಿಗೆ ನಾನೂ ಸಹ ಒಬ್ಬ ಆಕಾಂಕ್ಷಿಯಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.

ಬೆಂಗಳೂರಿನ ಲಕ್ಷ್ಮೀದೇವಿನಗರದ ಕಾರ್ಪೊರೇಟರ್‌ ಆದ ಬಳಿಕ ಬಿಬಿಎಂಪಿ ಅಕೌಂಟ್ಸ್‌ ಸಮಿತಿ ಅಧ್ಯಕ್ಷನಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದರಿಂದ ಬಿಜೆಪಿ ನನ್ನ ಸೇವೆ ಗುರುತಿಸಿ, ಗುಲ್ಬರ್ಗಾ ಚುನಾವಣೆ ಉಸ್ತುವಾರಿ ನೀಡಿದ್ದು, ಅಲ್ಲಿನ ನಾಲ್ಕು ವಾರ್ಡ್‌ಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದೆ. ಗೋವಾ ಮತ್ತು ತಮಿಳುನಾಡು ಚುನಾವಣಾ ಉಸ್ತುವಾರಿ ನೀಡಿದ್ದು, ಅಲ್ಲೆಲ್ಲಾ ಉತ್ತಮವಾಗಿ ಕಾರ್ಯನಿರ್ವಹಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದರಿಂದ ಕೆಜಿಎಫ್‌ನಲ್ಲಿ ಪಕ್ಷವು ಅವಕಾಶ ನೀಡಿದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವುದಾಗಿ ತಿಳಿಸಿದರು.

ಬಿಜೆಪಿ ನಗರ ಘಟಕ ಅಧ್ಯಕ್ಷ ಕಮಲ್‌ ನಾಥನ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‌ ನಾರಾಯಣ್‌ ಕುಟ್ಟಿ, ಡಾ.ಅರಿವಳಗನ್‌, ಮುಖಂಡ ಚಂದ್ರಶೇಖರರೆಡ್ಡಿ (ಸುನೀಲ್‌), ಶ್ಯಾಮ್‌, ಕಣ್ಣೂರು ವಿಜಿಕುಮಾರ್‌, ಬಾಬಿ ಸುರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next