Advertisement

ಜಿಲ್ಲಾಸ್ಪತ್ರೆ ಹೆರಿಗೆ ಶಸ್ತ್ರಚಿಕಿತ್ಸಾ ಘಟಕ ಬಂದ್‌

11:24 AM Oct 08, 2018 | Team Udayavani |

ಕಲಬುರಗಿ: ಬಡವರು, ನಿರ್ಗತಿಕರು ಹಾಗೂ ಮಧ್ಯಮ ವರ್ಗದ ಗರ್ಭಿಣಿಯರು ಹೆರಿಗೆಗಾಗಿ ಜಿಲ್ಲಾಸ್ಪತ್ರೆಯನ್ನೇ ಅವಲಂಭಿಸಿರುತ್ತಾರೆ. ಆದರೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿನ ಹೆರಿಗೆ ಶಸ್ತ್ರಚಿಕಿತ್ಸಾ (ಸಿಜೇರಿಯನ್‌) ಘಟಕ ಕಳೆದ ಮೂರು ವಾರಗಳಿಂದ ಬಂದಾಗಿದ್ದರಿಂದ ಎಲ್ಲರೂ ಪರದಾಡುತ್ತಿದ್ದಾರೆ.

Advertisement

ಹೆರಿಗೆ ನೋವಿನೊಂದಿಗೆ ಜಿಲ್ಲಾಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸಾ ಘಟಕ ಬಂದಾಗಿದ್ದನ್ನು ಕಂಡ ಗರ್ಭೀಣಿಯರು ಜೀವ ಕೈಯಲ್ಲಿ ಹಿಡಿದುಕೊಂಡು ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ತೆರಳುವುದು ಅನಿವಾರ್ಯವಾಗಿದೆ.

ಸಾಮಾನ್ಯ ಹೆರಿಗೆಗೆ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ ಶಸ್ತ್ರಚಿಕಿತ್ಸೆ ಮೂಲಕವೇ ಹೆರಿಗೆ ಮಾಡಬೇಕಾದ ಆಪರೇಷನ್‌ ಥೇಟರ್‌ (ಒಟಿ) ನಂಜು (ಅಡ್ಡ ಪರಿಣಾಮ) ಹಿನ್ನೆಲೆಯಲ್ಲಿ ಶುದ್ಧೀಕರಿಸುವ ನಿಟ್ಟಿನಲ್ಲಿ ಬಂದಾಗಿದೆ. ಇನ್ನೂ ಎರಡು ವಾರಗಳ ಕಾಲ ಘಟಕ ಆರಂಭವಾಗುವುದಿಲ್ಲ ಎನ್ನುತ್ತಾರೆ ಆಸ್ಪತ್ರೆ ವೈದ್ಯರು.

ಖಾಸಗಿ ಆಸ್ಪತ್ರೆಗಳಿಗೆ ಸುಗ್ಗಿ: ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಘಟಕ ಚೆನ್ನಾಗಿದ್ದ ಸಮಯದಲ್ಲೇ ಆರೋಗ್ಯ ಕವಚಗಳು (108) ಅಂಬ್ಯುಲೆನ್ಸ್‌ ವಾಹನಗಳು ಖಾಸಗಿ ಆಸ್ಪತ್ರೆಗಳತ್ತ ಸಾಗುತ್ತಿದ್ದವು. ಆದರೆ ಈಗ ಘಟಕ ಬಂದಾಗಿದ್ದನ್ನು ನೆಪ ಮಾಡಿಕೊಂಡು ನೇರವಾಗಿ ಎಲ್ಲ 108 ವಾಹನಗಳು ಖಾಸಗಿ ಆಸ್ಪತ್ರೆಯತ್ತಲೇ ತೆರಳುತ್ತಿವೆ. ಹೀಗಾಗಿ ಬಡವರು-ಮಧ್ಯಮ ವರ್ಗದವರು ಹೆರಿಗೆ ಶಸ್ತ್ರಚಿಕಿತ್ಸೆ ಶುಲ್ಕ ಪಾವತಿಸಲು ಪರದಾಡುತ್ತಿದ್ದಾರೆ. ಗರ್ಭಿಣಿಯರಿಗೆ ಸಾಮಾನ್ಯ

ಹೆರಿಗೆ ಆಗುವ ಸಾಧ್ಯತೆ ಕಡಿಮೆ ಎಂಬ ಸಂದರ್ಭದಲ್ಲೇ ಮಾತ್ರ ದಿನಕ್ಕೆ ಎರಡೂಮೂರೂ ಶಸ್ತ್ರಚಿಕಿತ್ಸೆಗಷ್ಟೇ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ ಶಸ್ತ್ರಚಿಕಿತ್ಸೆ ಮೂಲಕವೇ ಹೆರಿಗೆ ಆಗುವವರನ್ನು ದಾಖಲು ಮಾಡಿಕೊಳ್ಳಲಾಗುತ್ತಿಲ್ಲ. ಈ ಮೊದಲು ದಿನಕ್ಕೆ 14-18 ಹೆರಿಗೆಗಳು ಶಸ್ತ್ರಚಿಕಿತ್ಸೆ ಮೂಲಕ ಆಗುತ್ತಿದ್ದವು. 22ರಿಂದ 26 ಸಾಮಾನ್ಯ ಹೆರಿಗೆಗಳಾಗುತ್ತವೆ.

Advertisement

ಪರದಾಟ: ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲೂ ಹೆರಿಗೆ ಆಗದವರನ್ನು ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಆದರೆ ಈಗ 108 ಅಂಬ್ಯುಲೆನ್ಸ್‌ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿವೆ. ಕೈಯಲ್ಲಿ ನೂರು ಸಹ ಇರದ ಬಡವರು-ಕಡುಬಡವರು ಖಾಸಗಿ ಆಸ್ಪತ್ರೆಯಲ್ಲಿನ ಹೆಚ್ಚಿನ ಬಿಲ್‌ ನೋಡಿಯೇ ದಂಗಾಗಿದ್ದಾರೆ. ತಮ್ಮಲ್ಲಿ ಹಣ ಇಲ್ಲ. ಸಾಲ
ಮಾಡಿ ಹಣ ಕಟ್ಟುತ್ತೇವೆ ಎಂದರೆ ಆಸ್ಪತ್ರೆಯವರು ಸುತಾರಾಂ ಒಪ್ಪುತ್ತಿಲ್ಲ. ಹೀಗಾಗಿ ಮಕ್ಕಳ ಭಾಗ್ಯ ಕಾಣುವ ಬಡವರು ಹೀಗೆ ಎದುರಾದ ಪರಿಸ್ಥಿಯಿಂದ ನಲುಗುತ್ತಿದ್ದಾರೆ.

ಬಸವೇಶ್ವರ ಆಸ್ಪತ್ರೆಯಲ್ಲಿ ಹೆಚ್ಚಳ: ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯನ್ನು ಶಸ್ತ್ರಚಿಕಿತ್ಸಾ ಮೂಲಕ ನೆರವೇರಿಸುವ ಘಟಕ ಬಂದಾಗಿದ್ದರಿಂದ ಈ ಭಾಗದ ಪ್ರತಿಷ್ಠಿತ ಬಸವೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಹೆರಿಗೆ ಪ್ರಮಾಣ ಎರಡು ಪಟ್ಟು ಹೆಚ್ಚಳವಾಗಿದೆ. ಬಸವೇಶ್ವರ ಆಸ್ಪತ್ರೆಯಲ್ಲೂ ಉಚಿತ ಜನರಲ್‌ ವಾರ್ಡ್ಗೆ ದಾಖಲಾದರೆ ತದನಂತರ ಹೆರಿಗೆ ಹಾಗೂ
ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಲಾಗುತ್ತದೆ.

ಹೀಗಾಗಿ ಹೆರಿಗೆ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಬಸವೇಶ್ವರ ಆಸ್ಪತ್ರೆ ಅಧೀಕ್ಷಕ ಡಾ| ಶರಣಗೌಡ ಪಾಟೀಲ ತಿಳಿಸಿದ್ದಾರೆ. ನಗರದ ಬಸವೇಶ್ವರ ಆಸ್ಪತ್ರೆ ಹಾಗೂ ಸಂಗಮೇಶ್ವರ ಆಸ್ಪತ್ರೆಯಲ್ಲಿ ಹೆರಿಗೆ ಉಚಿತವಾಗಿದ್ದರೂ 108 ಅಂಬ್ಯುಲೆನ್ಸ್‌ ದವರು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ.

ರವಿವಾರ ಕಮಲಾಪುರ ಆಸ್ಪತ್ರೆಗೆ ದಿನಸಿ ತಾಂಡಾದ ಶಾಂತಾಬಾಯಿ ಎನ್ನುವ ಗರ್ಭೀಣಿ ಹೆರಿಗೆ ಎಂದು ದಾಖಲಾಗಿದ್ದಾರೆ. ಆದರೆ ಆಸ್ಪತ್ರೆಯವರು ಸಾಮಾನ್ಯ ಹೆರಿಗೆ ಸಾಧ್ಯವಿಲ್ಲ ಎಂದು ಹೇಳಿದರು. ಕೊನೆಗೆ ಅನಿವಾರ್ಯವಾಗಿ 108 ಅಂಬ್ಯುಲೆನ್ಸ್‌ ಮೂಲಕ ಕಲಬುರಗಿಗೆ ಕಳುಹಿಸಿ ಕೊಟ್ಟರು. ಆದರೆ ಅಂಬ್ಯುಲೆನ್ಸ್‌ದವರು ಬಸವೇಶ್ವರ ಆಸ್ಪತ್ರೆಗೆ ಬರದೇ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಯವರು 50 ಸಾವಿರ ಬಿಲ್‌ ಮಾಡಿದ್ದನ್ನು ನೋಡಿ ಸಂಬಂಧಿಕರು ಗಾಬರಿಯಾಗಿದ್ದಾರೆ. ಹೀಗೆ ದಿನಾಲು ಹತ್ತಾರು ಪ್ರಕರಣ ನಡೆಯುತ್ತಲೇ ಇವೆ.

108 ಕಾರ್ಯವೈಖರಿ ಪರಿಶೀಲನೆ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಘಟಕ ಬಂದಾಗಿರುವುದರಿಂದ
108 ಅಂಬ್ಯುಲೆನ್ಸ್‌ ದವರು ಕಮಲಾಪುರದಿಂದ ಶಾಂತಾಬಾಯಿಯನ್ನು ಹೆರಿಗೆಗೆ ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಬರಬೇಕಿತ್ತು. ಆದರೆ ಚಾಂದ್‌ಚೌಕ್‌ನ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುವುದನ್ನು ಪರಿಶೀಲಿಸುತ್ತೇವೆ. ಲೋಪ ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕದ ಹೆರಿಗೆ ಘಟಕ ಇನ್ನೆರಡು ವಾರಗಳಲ್ಲಿ ಕಾರ್ಯಾರಂಭ ಮಾಡಲಿದೆ.
 ಡಾ| ಎಂ.ಕೆ. ಪಾಟೀಲ, ಡಿಎಚ್‌ಒ, ಕಲಬುರಗಿ

ವ್ಯವಸ್ಥೆಗೆ ಸೂಚನೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯನ್ನು ಶಸ್ತ್ರಚಿಕಿತ್ಸೆ ಮೂಲಕ ನಿರ್ವಹಿಸುವ ಘಟಕ ಬಂದಾಗಿರುವುದರಿಂದ ಬಡವರಿಗೆ ತೊಂದರೆಯಾಗಿದೆ ನಿಜ. ಆದರೆ ನಾಳೆಯಿಂದಲೇ ಆಸ್ಪತ್ರೆಯಲ್ಲಿ ಮಗದೊಂದು ಶಸ್ತ್ರಚಿಕಿತ್ಸಾ ಘಟಕದಲ್ಲಿ ಇನ್ನೊಂದು ಹೆರಿಗೆ ಟೇಬಲ್‌ ಅಳವಡಿಸುವಂತೆ ಸೂಚಿಸಲಾಗಿದೆ.
 ಪ್ರಿಯಾಂಕ್‌ ಖರ್ಗೆ,ಸಚಿವರು

ರವಿವಾರ ಕಮಲಾಪುರ ಆಸ್ಪತ್ರೆಗೆ ಹೆರಿಗೆಗೆ ಸಹೋದರಿ ಶಾಂತಾಬಾಯಿ ಅವರನ್ನು ಸೇರಿಸಿದಾಗ ತದನಂತರ ಕಲಬುರಗಿಗೆ ಶಿಫಾರಸು ಮಾಡಲಾಯಿತು. ಆದರೆ 108 ಅಂಬ್ಯುಲೆನ್ಸ್‌ದವರು ಚಾಂದ್‌ಚೌಕನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತದನಂತರ ಹೆರಿಗೆಗೆ 50 ಸಾವಿರ ರೂ. ಬಿಲ್‌ ಮಾಡಲಾಗಿದೆ. ಇದನ್ನು ಕಟ್ಟಲು ತಮಗಾಗುತ್ತಿಲ್ಲ.
 ಸಂತೋಷ ಚವ್ಹಾಣ, ಶಾಂತಾಬಾಯಿ ಸಹೋದರ

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next