Advertisement

ಹಣ ದೋಚುವ ಕಾರ್ಯದಲ್ಲಿ ಮಗ್ನವಾಗಿದೆ ಜಿಲ್ಲಾಸ್ಪತ್ರೆ: ರೈತರ ಸಂಘ ಆರೋಪ

03:02 PM Sep 12, 2020 | sudhir |

ಕೊಪ್ಪಳ: ಕೋವಿಡ್‌ನಿಂದಾಗಿ ರೋಗಿಗಳು ನಿತ್ಯ ಮೃತಪಡುತ್ತಿದ್ದಾರೆ. ಕೂಡಲೇ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ (ಎಐಕೆಕೆಎಸ್‌) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಯಾವುದೇ ಪೂರ್ವ ತಯಾರಿ ಇಲ್ಲದೇ ಸರ್ಕಾರ 2 ತಿಂಗಳು ಲಾಕ್‌ಡೌನ್‌ ಮಾಡಿ ದುಡಿಯುವ ಜನರಿಗೆ ದೊಡ್ಡ ಸಂಕಷ್ಟ ತಂದೊಡ್ಡಿತು. ಸರ್ಕಾರ ತನ್ನ ತಪ್ಪಿನಿಂದ ಮತ್ತು ಅವೈಜ್ಞಾನಿಕ ತೀರ್ಮಾನದಿಂದ ಹೊರ ಬಂದು ಲಾಕ್‌ಡೌನ್‌ ತೆರವುಗೊಳಿಸಿತು. ನಷ್ಟಗೊಂಡ ಆರ್ಥಿಕತೆಯನ್ನು ಮೇಲೆತ್ತುವ ಬರದಲ್ಲಿ ಜನರ ಆರೋಗ್ಯ ಮತ್ತು ಸಾವುಗಳನ್ನು ನಿರ್ಲಕ್ಷಿಸಿದೆ. ರಾಜ್ಯ ಸರ್ಕಾರದ ಮೇಲ್ಮಟ್ಟದ ಭ್ರಷ್ಟಾಚಾರದಿಂದ ನೂರಾರು ಕೋಟಿ ತೆರಿಗೆ ಹಣ ಲೂಟಿಯಾಗಿದೆ.

ರಾಜ್ಯದ ಅನೇಕ ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿಗಳು ಹಣ ದೋಚುವ ಕಾರ್ಯದಲ್ಲಿ ಮಗ್ನವಾಗಿವೆ. ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಮಂಜೂರಿಯಾಗಿದ್ದ 25 ವೆಂಟಿಲೆಟರ್‌ಗಳಲ್ಲಿ 5 ವೆಂಟಿಲೆಟರ್‌ಗಳು ದುರಸ್ತಿಯಲ್ಲಿವೆ ಎಂದು ಆರೋಪಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಹಲವಾರು ಸಮಸ್ಯೆಗಳಿಂದ ರೋಗಿಗಳಿಗೆ ತೊಂದರೆಯಾಗಿದೆ. ಸಾಮಾನ್ಯ ಚಿಕಿತ್ಸೆಗೆ ಬರುವ ರೋಗಿಗಳನ್ನು ಒಳಗಡೆ ಬಿಟ್ಟುಕೊಳ್ಳದೇ ಅನಗತ್ಯ ತೊಂದರೆ ಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುವ ಬಡವರ ಜೀವಗಳು ಬಲಿಯಾಗುತ್ತಿವೆ. ಇದಲ್ಲದೆ ಮೆಡಿಕಲ್‌ ಕಾಲೇಜ್‌ ಮತ್ತು ಜಿಲ್ಲಾಸ್ಪತ್ರೆಯ ಆಡಳಿತಗಾರರ-ವೈದ್ಯರ ಮಧ್ಯೆ ವೈಮನಸ್ಸು ಉಂಟಾಗಿದೆ. ಈ ಕಾರಣದಿಂದ ಆಸ್ಪತ್ರೆಯ ವೈದ್ಯರ ಮಧ್ಯೆ ಪರಸ್ಪರ ವಿಶ್ವಾಸ ಇಲ್ಲದಂತಾಗಿದೆ. ಕೆಲ ವೈದ್ಯರು 12 ಗಂಟೆವರೆಗೆ ಕೆಲಸ ಮಾಡಿದರೆ ಇನ್ನೂ ಕೆಲವರು ಸಮಯಕ್ಕೆ ಮುಂಚೆಯೆ ಹೊರ ನಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಈರಣ್ಣ ಕಮತರ ಮೆಡಿಕಲ್‌ ಕಾಲೇಜ್‌ಗೆ ಸಿಎಒ ಆಗಿ ನೇಮಕಗೊಂಡ ನಂತರ ಹಲವಾರು ಸಮಸ್ಯೆಗಳು ಉಂಟಾಗಿವೆ. ಸ್ಥಳೀಯ ಕೃಷಿ ಇಲಾಖೆ ಮತ್ತು ಜಿಲ್ಲಾ ಜಲ ನಿರ್ಮಲ ಇಲಾಖೆಯಲ್ಲಿ ಹತ್ತಾರು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಈರಣ್ಣ ಕಮತರ ಮೆಡಿಕಲ್‌ ಕಾಲೇಜ್‌ ಸಿಎಒ ಆಗಿ ನೇಮಕಗೊಂಡಿದ್ದಾರೆ. ಕಾಲೇಜ್‌ ಮತ್ತು ಜಿಲ್ಲಾ ಆಸ್ಪತ್ರೆಯ ಆಡಳಿತ ವ್ಯವಹಾರಕ್ಕೆ ಸಂಬಂಧಿ ಸಿ, ಈರಣ್ಣ ಕಮತರ ಮತ್ತು ಸರ್ಜನ್‌ ಡಾ| ದಾನರಡ್ಡಿ ಅವರ ಮಧ್ಯೆ ವೈಮನಸ್ಸು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಡಾ| ದಾನರಡ್ಡಿ ಅವರನ್ನು ಒಂದು ತಿಂಗಳು ರಜೆಯ ಮೇಲೆ ಕಳಿಸಲಾಗಿದೆ ಎಂದೆನ್ನಲಾಗುತ್ತಿದೆ. ಈ ಬಗ್ಗೆ ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next