Advertisement

ಗರ್ಭಿಣಿಯರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೆ ಕ್ರಮ

07:47 PM Oct 30, 2020 | Suhan S |

ಬಳ್ಳಾರಿ: ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗರ್ಭಿಣಿಯರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಉದ್ದೇಶಪೂರ್ವಕವಾಗಿ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದು ಕಂಡುಬಂದಲ್ಲಿ ಅದಕ್ಕೆ ಪ್ರೋತ್ಸಾಹಿಸಿದವರನ್ನು ಸೇರಿಸಿ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಕೆ.ಆರ್‌.ನಂದಿನಿ ಖಡಕ್‌ ಎಚ್ಚರಿಕೆ ನೀಡಿದರು.

Advertisement

ನಗರದ ಜಿಪಂ ನಜೀರ್‌ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಶಾಗಳು ಉದ್ದೇಶಪೂರ್ವಕವಾಗಿ ಖಾಸಗಿ ಆಸ್ಪತ್ರೆಗಳಿಗೆ ಗರ್ಭಿಣಿಯರನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಇದಕ್ಕೆ ಯಾವುದೇ ಕಾರಣಕ್ಕೂ ಅಸ್ಪದ ಮಾಡಿಕೊಡಬಾರದು. ಅಂಬ್ಯುಲೆನ್ಸ್‌ (108 ತುರ್ತು ವಾಹನಗಳು)ಚಾಲಕರು ಹೆರಿಗೆ ಪ್ರಕರಣಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಕರೆದುಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಆಯಾ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್‌.ಎಲ್‌. ಜನಾರ್ಧನ್‌ ಅವರಿಗೆ ನಿರ್ದೇಶನ ನೀಡಿದರು.

ಅನುದಾನ ನೀಡಿಕೆಗೆ ದಾಖಲಾತಿ ನೆಪಬೇಡ: ಸರ್ಕಾರಿ ಆಸ್ಪತ್ರೆಗಳಿಗೆ ಹೆರಿಗೆಗಾಗಿ ಆಗಮಿಸುವ ಗರ್ಭಿಣಿಯರಿಗೆ ಹೆರಿಗೆ ನಂತರ ನೀಡುವ ಜೆ.ಎಸ್‌.ವೈ ಸಹಾಯ ಧನವನ್ನು ದಾಖಲಾತಿಗಳು ಇಲ್ಲವೆಂಬ ನೆಪ ಹೇಳಿ ಕಳುಹಿಸುವ ಕೆಲಸ ಮಾಡಬಾರದು ಎಂದ ಸಿಇಒ ನಂದಿನಿ ಅವರು ಗರ್ಭಿಣಿಯರು ಮೊದಲ ತಪಾಸಣೆಗೆ ತೆರಳಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಯಿಕಾರ್ಡ್‌ ಪಡೆದುಕೊಳ್ಳಬೇಕು. ಜೆಎಸ್‌ವೈ ಸೇರಿದಂತೆ ವಿವಿಧ ಯೋಜನೆಗಳ ಸಂದರ್ಭದಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ನೀರಿನ ಮಾದರಿ ಪರೀಕ್ಷಿಸಿ ವರದಿ ನೀಡಿ: ರಾಷ್ಟ್ರೀಯ ಪ್ಲೋರೊಸಿಸ್‌ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಎಲ್ಲ ನೀರಿನ ಮೂಲಗಳನ್ನು ಮುಖ್ಯವಾಗಿ ಫ್ಲೋರೈಡ್‌ ಬಾ ತ ಗ್ರಾಮಗಳಲ್ಲಿ ನೀರಿನ ಮಾದರಿಯನ್ನು ಪರೀಕ್ಷಿಸಿ ಒಂದು ತಿಂಗಳೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಜಿಪಂ ಸಿಇಒ ಕೆ.ಆರ್‌.ನಂದಿನಿ ಸೂಚಿಸಿದರು. ಫ್ಲೋರೈಡ್‌ ಬಾಧಿತ ಪ್ರದೇಶಗಳಲ್ಲಿ ತೋಟಗಾರಿಕೆ ಮತ್ತು ಅರಣ್ಯ ಇಲಾಖೆ ಸಹಕಾರದೊಂದಿಗೆ ಹುಣುಸೆ, ನಿಂಬೆ, ನಲ್ಲಿಕಾಯಿ, ಕರಿಬೇವು, ಪಪ್ಪಾಯ ಹಾಗೂ ಇನ್ನಿತರೆ ಗಿಡಗಳನ್ನು

ಬೆಳೆಸುವ ಮೂಲಕ ಫ್ಲೋರೈಡ್‌ನಿಂದ ಆಗುವ ಹಾನಿಯನ್ನು ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದ ಅವರು, ತಾಲೂಕುಮಟ್ಟದಲ್ಲಿ ನೀರು ಮತ್ತು ನೈರ್ಮಲ್ಯ ಸಭೆ ಕರೆದು ಕ್ರಮವಹಿಸಬೇಕು. ಜಿಲ್ಲೆಯ ಎಲ್ಲ ನೀರಿನ ಮೂಲಗಳನ್ನು ಪ್ರತಿ 3 ತಿಂಗಳಿಗೊಮ್ಮೆಪುನರಾವರ್ತನೆಯಾಗುವ ರೀತಿಯಲ್ಲಿ ಪರೀಕ್ಷೆ ನಡೆಸುವಂತೆ ಅವರು ಕಟ್ಟುನಿಟ್ಟಾಗಿ ಸೂಚಿಸಿದರು.

Advertisement

ಟೆಲಿಮೆಡಿಸಿನ್‌ ಅನುಷ್ಠಾನಕ್ಕೆ ಸೂಚನೆ: ಟೆಲಿಮೆಡಿಸನ್‌ ಕಾರ್ಯಕ್ರಮ ಅಡಿಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ 73 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 130 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಮೂಲಕ ಜಿಲ್ಲಾ ಆಸ್ಪತ್ರೆಯ ಹಬ್‌ ಸೆಂಟರ್‌ಗೆ ರೋಗಿಗಳು ತಮ್ಮ ಆರೋಗ್ಯದ ತೊಂದರೆಗಳನ್ನು ನೇರವಾಗಿ ತಜ್ಞ ವೈದ್ಯರನ್ನು ಸಂಪರ್ಕಿಸುವ ಮೂಲಕ ರೋಗನಿರ್ಣಯ ಹಾಗೂ ಸೂಕ್ತ ಚಿಕಿತ್ಸೆಗೆ ಅವಕಾಶವಿದೆ. ತಕ್ಷಣ ಅಗತ್ಯ ಪರಿಕರಗಳನ್ನು ಖರೀದಿಸಿ ಅನುಷ್ಠಾನಮಾಡುವಂತೆ ತಿಳಿಸಿದ ಜಿಪಂ ಸಿಇಒ ಕೆ.ಆರ್‌.

ನಂದಿನಿ ಅವರು ಈ ಕುರಿತು ವ್ಯಾಪಕ ಪ್ರಚಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಜಾಗೃತಿ ಸಪ್ತಾಹದ ಅಂಗವಾಗಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್‌.ಎಲ್‌. ಜನಾರ್ಧನ್‌,ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್‌.ಬಸರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಅನಿಲ್‌ ಕುಮಾರ್‌, ವಿಮ್ಸ್‌ ಅಧೀಕ್ಷಕ ಮರಿರಾಜ್‌ ಸೇರಿದಂತೆ ತಾಲ್ಲೂಕ ಆರೋಗ್ಯ ಅಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next