ಕಾಸರಗೋಡು: ನೂರಾರು ವರ್ಷಗಳ ಇತಿಹಾಸವಿರುವ ನೀರ್ಚಾಲು ಮದಕವನ್ನು ಅಭಿವೃದ್ಧಿಪಡಿಸಲು ಹಸಿರು ನಿಶಾನೆ ತೋರಲಾಗಿದೆ. ಈ ಪ್ರದೇಶದ ಅಂತರ್ಜಲ ಸಮೃದ್ಧಿ, ಕುಡಿಯುವ ನೀರು, ಕೃಷಿಗೆ ನೀರುಣಿಸುವ ಬೃಹತ್ ಜಲ ಮರುಪೂರಣ ಯೋಜನೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಳೆಗಾಲ ಆರಂಭವಾದರೂ ಮಳೆ ನೀರು ಲಭ್ಯತೆ ತೀರಾ ಕಡಿಮೆ. ಭಾರೀ ಮಳೆ ಸುರಿಯಬೇಕಾದ ಆಧ್ರಾ, ಪುನರ್ವಸು ನಕ್ಷತ್ರ ಮುಕ್ತಾಯ ಹಂತದಲ್ಲೂ ಬೇಸಿಗೆ ಕಾಲದ ವಾತಾವರಣ ಮುಂದುವರಿಯುತ್ತಿರುವುದು ಕೃಷಿಕರಲ್ಲೂ, ಅಧಿಕಾರಿಗಳಲ್ಲೂ ಆತಂಕ ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ಜಲ ಕ್ಷಾಮದ ಗರಿಷ್ಠತೆಯನ್ನು ಚಿಂತಿಸುವಂತೆ ಮಾಡಿದೆ.
ನೀರ್ಚಾಲು ಮದಕದ ಮೂಡು, ತೆಂಕು ಭಾಗದಲ್ಲಿ ನೀರ್ಚಾಲು, ಓಣಿಯಡ್ಕ ಹಾಗು ಪುದುಕೋಳಿ ಭತ್ತದ ಕೃಷಿ ಬಯಲುಗಳಲ್ಲಿ ಇನ್ನೂ ಕೃಷಿ ಕೆಲಸಗಳು ನೀರಿನ ಕೊರತೆಯಿಂದ ಆರಂಭಗೊಂಡಿಲ್ಲ.
ಸಮೀಪದ ಭತ್ತದ ಬಯಲುಗಳಾದ ಮಾನ್ಯ, ಏಣಿಯರ್ಪುಗಳಲ್ಲಿ ಮುಕ್ಕಾಲು ಭಾಗ ಭತ್ತದ ಕೃಷಿ ಪೂರ್ಣಗೊಂಡಿದೆ.
ಎಡೆಬಿಟ್ಟು ಮಳೆ ಸುರಿಯುತ್ತಿರುವುದರಿಂದ ಕೃಷಿಗೆ ಸಮರ್ಪಕವಾಗಿ ನೀರು ಲಭಿಸದೆ ಇರುವುದು ಆತಂಕ ಮೂಡಿಸಿದೆ.