Advertisement
ಬಾಗಲಕೋಟೆಗೂ ಮುಂಬೈಗೂ ಬಹು ವರ್ಷಗಳಿಂದ “ವಿವಿಧ’ ವಿಷಯಗಳಿಗೆ ನಂಟಿದೆ. ಕೆಲವರು ಬೇಕೆಂದೇ ಅಲ್ಲಿಗೆ ಹೋದರೆ ಇನ್ನೂ ಕೆಲವರು ಒತ್ತಾಯ ಪೂರ್ವಕವಾಗಿ “ರೆಡ್ ಲೈಟ್’ ಜಾಲಕ್ಕೆ ಸಿಲುಕಿದ್ದ ಪ್ರಸಂಗ ನಡೆದಿವೆ. ಇದೀಗ ಜಿಲ್ಲೆಯಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಸ್ವತಃ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಗಂಭೀರ ಶಂಕೆಯೊಂದಿಗೆ ಜಿಲ್ಲಾಧಿಕಾರಿಗೆ ವಿಸ್ತೃತ ಪತ್ರವೊಂದನ್ನು ಬರೆದಿದ್ದು, ಮಕ್ಕಳ ಕಳ್ಳ ಸಾಗಾಣಿಕೆ ವಿಷಯದಲ್ಲಿ ಮೂವರು ಮಹಿಳೆಯರ ಮೇಲೆ ಬಲವಾದ ಶಂಕೆ ಇದೆ, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದೆ.
Related Articles
Advertisement
ರಾಜಕೀಯ ನಾಯಕರ ಹಿಂಬಾಲಕರ ಹೆಸರು : ಮಕ್ಕಳ ಕಳ್ಳ ಸಾಗಣೆ ವಿಷಯದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸಂಶಯವ್ಯಕ್ತಪಡಿಸಿ ನೇರವಾಗಿ ಒಂದು ಎನ್ ಜಿಒ, ಮೂವರು ಮಹಿಳೆಯರ ಹೆಸರು ಉಲ್ಲೇಖೀಸಿ ಡಿಸಿಗೆ ದೂರು ನೀಡಿದೆ. ಆ ಹೆಸರುಗಳು ಗಮನಿಸಿದರೆ ಪ್ರಭಾವಿ ರಾಜಕೀಯ ಮುಖಂಡರ ಹಿಂಬಾಲಕರ ಹೆಸರೇ ಪ್ರಮುಖವಾಗಿವೆ. ಅಲ್ಲದೇ ಗ್ರಾಮೀಣ ಭಾಗದ ಅದರಲ್ಲೂ ಆರ್ಥಿಕ ಆಶಕ್ತವಾಗಿರುವ ಹೆಣ್ಣು ಮಕ್ಕಳೇ ಹೆಚ್ಚಿಗೆ ಇರುವ ಕುಟುಂಬಗಳನ್ನು ದಾಳವಾಗಿಸಿಕೊಂಡು ಅವರಿಗೆ ಹಣದ ಆಮಿಷವೊಡ್ಡಿ ಮಕ್ಕಳ ಮಾರಾಟದಂತಹ ಪ್ರಕರಣ ನಡೆಯುತ್ತಿವೆ. ಇದಕ್ಕೆ ಮಹಾರಾಷ್ಟ್ರದ ಮುಂಬೈ, ಸೊಲ್ಲಾಪುರ, ಕೊಲ್ಲಾಪುರ, ಸತಾರಾ, ಸಾಂಗ್ಲಿ ಸಹಿತ ಹಲವು ಕಡೆ ಏಜೆಂಟ್‌ರೂ ಇದ್ದಾರೆ. ಅವರೊಂದಿಗೆ ಜಿಲ್ಲೆಯ ಕೆಲ ಪ್ರಭಾವಿಗಳೇ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಜಮಖಂಡಿಯ ಪ್ರಕರಣವೊಂದರಿಂದ ಮಕ್ಕಳ ಕಳ್ಳ ಸಾಗಣೆ ಕುರಿತು ಬಲವಾದ ಸಂಶಯ ಬಂದಿದೆ. ಈ ಕುರಿತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ವಿಸ್ತೃತ ಚರ್ಚೆಯಾಗಿದೆ. ಬಾಲಕಿಯ ಹೇಳಿಕೆ, ಅವರ ತಾಯಿಯ ಲಿಖೀತ ಹೇಳಿಕೆ ಹಿನ್ನೆಲೆಯಲ್ಲಿ ಈ ಸಂಶಯ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. –ಗುಲಾಬ ಸಿ. ನದಾಫ, ಅಧ್ಯಕ್ಷರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ
ಇದು ನೇರವಾಗಿ ನಮ್ಮ ಇಲಾಖೆಗೆ ಸಂಬಂಧಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದೇವೆ. ಸಮಿತಿ ವ್ಯಕ್ತಪಡಿಸಿದ ಸಂಶಯಗಳಲ್ಲಿ ಕೆಲವು ದೃಢಪಟ್ಟರೆ, ಕೆಲವು ಸಹಜ ಆರೋಪಗಳಾಗಿವೆ. ಈ ಕುರಿತು ತನಿಖೆಯ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸೋಮವಾರ ಸಲ್ಲಿಸಿದ್ದೇವೆ. –ಅಶೋಕ ಬಸಣ್ಣನವರ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
-ಶ್ರೀಶೈಲ ಕೆ. ಬಿರಾದಾರ