Advertisement

28ಕ್ಕೆ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ

04:12 PM Jan 22, 2018 | Team Udayavani |

ರಾಯಚೂರು: ಕನ್ನಡ ಜಾನಪದ ಪರಿಷತ್‌ನಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ ಮತ್ತು ರಾಜ್ಯಮಟ್ಟದ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಸಮಾರಂಭ ಜ.28ರಂದು ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್‌.ಎಸ್‌.ಬೋಸರಾಜು ತಿಳಿಸಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಹಿರಿಯ ಜನಪದ ಕಲಾವಿದ ಬಸಪ್ಪ ಹೆಗ್ಗಡದಿನ್ನಿ
ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಜಾನಪದ ಕಲೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂಥ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಜಾನಪದ ಮೆರವಣಿಗೆ, ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರಕಲಾ ಪ್ರದರ್ಶನ, ರಂಗೋಲಿ ಪ್ರದರ್ಶನ, ವೇದಿಕೆ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು.

ಜ.28ರಂದು ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ, ಕನ್ನಡ ಜಾನಪದ ಪರಿಷತ್‌ ಕಾರ್ಯಾಧ್ಯಕ್ಷ ಡಾ| ಎಸ್‌.ಬಾಲಾಜಿ
ಅವರಿಂದ ಪರಿಷತ್‌ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಸೋಮವಾರಪೇಟೆಯಿಂದ ಮುಖ್ಯ ರಸ್ತೆ ಮೂಲಕ ರಂಗಮಂದಿರದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ಜಾನಪದ ತಂಡಗಳ ಪ್ರದರ್ಶನ ಇರಲಿದ್ದು, ಜಿಲ್ಲೆ ಸೇರಿ ವಿವಿಧ ಪ್ರದೇಶಗಳಿಂದ 15ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿವೆ ಎಂದು
ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಠ್ಠ್ ಸಮ್ಮೇಳನ ಉದ್ಘಾಟಿಸುವರು. ನಂತರ ಕನ್ನಡ ಜಾನಪದ ವೆಬ್‌ಸೈಟ್‌
ಬಿಡುಗಡೆಗೊಳಿಸಲಾಗುವುದು. ಜಾನಪದ ತಜ್ಞ ಶಂಭು ಬಳಿಗಾರ ಮುಖ್ಯ ಭಾಷಣ ಮಾಡುವರು. ಪರಿಷತ್‌
ರಾಜ್ಯಾಧ್ಯಕ್ಷ ಟಿ.ಕೆ.ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ವಿದ್ವಾಂಸರು, ಜನಪದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಗುವುದು. ನಂತರ ಮಧ್ಯಾಹ್ನ 2ಕ್ಕೆ
ಅಪರಾಳ ತಮ್ಮಣ್ಣರ ಶ್ರೀಕೃಷ್ಣ ಪಾರಿಜಾತ ಕುರಿತು ಡಾ| ಸ್ವಾಮಿರಾವ್‌ ಕುಲಕರ್ಣಿ ವಿಶೇಷ ಉಪನ್ಯಾಸ ನೀಡುವರು.
ಬಳಿಕ ಉಪನ್ಯಾಸಕ ರಮೇಶಬಾಬು ಯಾಳಗಿ ಅಧ್ಯಕ್ಷತೆಯಲ್ಲಿ ಜಾನಪದ ಗೋಷ್ಠಿ ಜರುಗಲಿದ್ದು, ವೆಂಕನಗೌಡ ವಟಗಲ್‌
ಸೇರಿ ಇತರರು ವಿವಿಧ ವಿಷಯಗಳನ್ನು ಮಂಡಿಸುವರು.

Advertisement

ಸಂಜೆ 4:15ಕ್ಕೆ ಸಮಾರೋಪ ನಡೆಯಲಿದ್ದು, ಸಾನ್ನಿಧ್ಯವನ್ನು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ
ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಎನ್‌.ಎಸ್‌ .ಬೋಸರಾಜು ಅಧ್ಯಕ್ಷತೆ, ಜಾನಪದ ತಜ್ಞ ಡಾ| ಬಸವರಾಜ
ನೆಳಿಸಾರ ಸಮಾರೋಪ ನುಡಿಗಳನ್ನಾಡುವರು. ಸಂಜೆ 6:15ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಹಾಡು, ಗಾಯನ, ಬಯಲಾಟಗಳ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು. ಸ್ವಾಗತ ಸಮಿತಿ ಸದಸ್ಯರಾದ ಜಯಣ್ಣ, ಅಮರೇಗೌಡ ಹಂಚಿನಾಳ, ಅಬ್ದುಲ್‌ ಕರೀಂ, ಜಿ.ಸುರೇಶ, ಶರಣಪ್ಪ ಗೋನಾಳ, ಅರುಣಾ ಹಿರೇಮಠ, ವೀರಭದ್ರಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next