ರಾಯಚೂರು: ರಾಜ್ಯ ಸೇರಿದಂತೆ ದೇಶ, ವಿದೇಶಗಳಲ್ಲಿ ಬೇಡಿಕೆಯಿರುವ ಜಿಲ್ಲೆಯ ಸೋನಾ ಮಸೂರಿ ಅಕ್ಕಿಗೆ ಜಾಗತಿಕ ಮನ್ನಣೆ (ಜಿಯೋಗ್ರಾಫಿಕಲ್ ಟ್ಯಾಗ್) ದೊರಕಿಸುವ ನಿಟ್ಟಿನಲ್ಲಿ ಕೈಗಾರಿಕೆ, ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದು ಡಿಸಿ ಆರ್.ವೆಂಕಟೇಶ ಕುಮಾರ್ ನಿರ್ದೇಶನ ನೀಡಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ರಫು¤ ಉತ್ತೇಜನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಯಚೂರು ಜಿಲ್ಲೆಯಲ್ಲಿ ಭತ್ತ ಹೆಚ್ಚಾಗಿ ಬೆಳೆಯಲಾಗುತ್ತದೆ. ಇಲ್ಲಿನ ಸೋನಾ ಮಸೂರಿ ಅಕ್ಕಿಯನ್ನು ವಿಶ್ವಾದ್ಯಂತ ಪರಿಚಯಿಸಿ, ಜಾಗತಿಕ ಮಾರುಕಟ್ಟೆ ಒದಗಿಸಬೇಕು. ವಿವಿಧ ದೇಶಗಳಲ್ಲಿ ನಡೆಯುವ ವಿವಿಧ ಉತ್ಪನ್ನಗಳ ಪ್ರದರ್ಶನದಲ್ಲಿ ಪ್ರದರ್ಶಿಸಬೇಕು. ಅದಕ್ಕಾಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿ ಕೆಲಸ ಮಾಡಬೇಕು ಎಂದರು.
ರಾಜ್ಯ ಸರ್ಕಾರದಿಂದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಗೆ ಔಷ ಧ ಉತ್ಪನ್ನ ನಿಗದಿ ಪಡಿಸಲಾಗಿದೆ. ಅದರೊಂದಿಗೆ ಸೋನಾ ಮಸೂರಿ, ದಾಳಿಂಬೆ, ಹತ್ತಿ, ಅಂಜೂರ, ಮೆಣಸಿನ ಕಾಯಿಯನ್ನು ರಫ್ತು ಮಾಡಲು ಶ್ರಮಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹ್ಮದ್ ಇರ್ಫಾನ್‌ರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಫ್ತು ಮಾಡುತ್ತಿರುವ ಕೈಗಾರಿಕೋದ್ಯಮಿಗಳು ಹಾಗೂ ಉತ್ಪನ್ನಗಳನ್ನು ಗುರುತಿಸಿ ಅವರಿಗೆ ರಫ್ತು ಕುರಿತಂತೆ ಪರಿಣತಿ ಮೂಡಿಸಬೇಕು. ಈ ದಿಸೆಯಲ್ಲಿ ವ್ಯಾಪಕವಾಗಿ ಅರಿವು ಮೂಡಿಸಬೇಕು. ಸಂಭ್ಯಾವ್ಯ ರಫ್ತು ಉತ್ಪನ್ನಗಳನ್ನು ಗುರುತಿಸಿ ಅವುಗಳ ರಫ್ತಿಗೆ ಕೈಗೊಳ್ಳಬೇಕಾದ ಕ್ರಿಯಾ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ಫಾರ್ಮಾ ಉತ್ಪನ್ನಗಳಲ್ಲಿ ಶಿಲ್ಪಾ ಮೆಡಿಕೇರ್‌ನಿಂದ ಕ್ಯಾನ್ಸರ್ ರೋಗ ಸಂಬಂಧಿತ ಔಷಧವನ್ನು ಯೂರೋಪ್ ದೇಶಕ್ಕೆ ರಫ್ತುಮಾಡಲಾಗುತ್ತಿದೆ. ಇದರೊಂದಿಗೆ ಹೊಸದಾಗಿ ಪ್ರಾರಂಭವಾದ ಮತ್ತು ಈಗಾಗಲೇ ಜಿಲ್ಲೆಯಲ್ಲಿ ಉತ್ಪಾದಿಸುತ್ತಿರುವ ಮತ್ತು ರಫ್ತು ಮಾಡಬಹುದಾದ ಉತ್ಪನ್ನಗಳನ್ನು ಸಹ ಗುರುತಿಸುವಂತೆ ತಿಳಿಸಿದರು.
ರೈಸ್ ಮಿಲ್ಲರ್ ಅಸೊಸಿಯೇಶನ್ ಸದಸ್ಯರು, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಸದಸ್ಯರು, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕಬಸವರಾಜ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.