Advertisement

‘ಅನ್ಸಾರಿ ನಡಿಗೆ ಜನರ ಕಡೆಗೆ’ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ತಡೆ

03:53 PM Sep 02, 2021 | Team Udayavani |

ಗಂಗಾವತಿ: ‘ಅನ್ಸಾರಿ ನಡಿಗೆ ಜನರ ಆಶೀರ್ವಾದದ ಕಡೆಗೆ’ ಹೆಸರಿನ ಕಾಂಗ್ರೆಸ್ ಕಾರ್ಯಕ್ರಮವನ್ನು ಕೂಡಲೇ ರದ್ದುಪಡಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

Advertisement

ಪ್ರದೇಶ ಕಾಂಗ್ರೆಸ್ ಕಮಿಟಿ ಸೂಚನೆ ಮೇರೆಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ಇಂದು (ಸೆ.2) ಆನೆಗೊಂದಿಯಲ್ಲಿ ಈ ಕಾರ್ಯಕ್ರಮ ನಿಗದಿಯಾಗಿತ್ತು. ಕಾರ್ಯಕ್ರಮಕ್ಕೆ ನೀಡಿರುವ ಪರವಾನಿಗೆಯಲ್ಲಿ ಸೂಚಿಸಿದ್ದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರುತ್ತಿರುವುದರಿಂದ ಕೋವಿಡ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಪಡಿಸುವಂತೆ ಗಂಗಾವತಿ ತಹಸಿಲ್ದಾರ್ ಚೇರಿಯಲ್ಲಿ ಜರುಗಿದ ಸಭೆಯಲ್ಲಿ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ತಹಸೀಲ್ದಾರ್ ಯು ನಾಗರಾಜ ಕಾಂಗ್ರೆಸ್ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ಸಂಗಾಪುರ ಮಲ್ಲಾಪುರ ಕೇಸರಹಟ್ಟಿ ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.ಈ ಕಾರ್ಯಕ್ರಮದಲ್ಲಿ ಬಿಜೆಪಿ ಸರಕಾರ ಮತ್ತು ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಮತ್ತು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಅನ್ಸಾರಿಯವರು ಟೀಕೆ ಮಾಡಿದ್ದರು.

ಮುಂಬರುವ ಜಿಲ್ಲಾ ಪಂಚಾಯತ್, ತಾಲ್ಲೂಕ ಪಂಚಾಯಿತಿ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ವಿಧಾನಸಭಾ ಕ್ಷೇತ್ರವಾರು ಕಾರ್ಯಕ್ರಮ ಆಯೋಜನೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ,ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ಅನ್ಸಾರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಳೆದ ವಾರ ಜನರ ಬಳಿಗೆ ಅನ್ಸಾರಿ ಕಾರ್ಯಕ್ರಮ ನಡೆಸಲು ಪ್ರತಿದಿನ ತೆರಳುತ್ತಿದ್ದರು.

ಪ್ರಕರಣ ದಾಖಲಿಸುವಂತೆ ಸೂಚನೆ:

Advertisement

ತಾಲ್ಲೂಕಿನ ಕೆಸರಹಟ್ಟಿಯಲ್ಲಿ ಪಟಾಕಿ ಸಿಡಿಸಿ ಸಾವಿರಾರು ಜನರನ್ನು ಸೇರಿಸಿ ಅನ್ಸಾರಿ ನಡಿಗೆ ಜನರ ಆಶೀರ್ವಾದ ಕಡೆಗೆ ಎನ್ನುವ ಕಾರ್ಯಕ್ರಮ ನಡೆಸಿದ್ದರಿಂದ ಕೋವಿಡ್ ಹರಡುವ ಭೀತಿ ಹಿನ್ನೆಲೆಯಲ್ಲಿ ಮತ್ತು ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ದೂರು ದಾಖಲಿಸುವಂತೆ ಸಹಾಯಕ ಆಯುಕ್ತ ಹಾಗೂ ತಹಶೀಲ್ದಾರ್ ಇವರು ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಡಳಿತದಿಂದ ತಾರತಮ್ಯ ನೀತಿ ಖಂಡನೆ: ಜಿಲ್ಲಾಡಳಿತ ಆಡಳಿತ ಪಕ್ಷದವರು ಹೇಳಿದಂತೆ ನಡೆಯುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಟೀಕಿಸಿದ್ದಾರೆ. ಬಿಜೆಪಿ  ಮಂತ್ರಿಗಳು,  ಶಾಸಕರು ಸಾವಿರಾರು ಸಂಖ್ಯೆಯಲ್ಲಿ  ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಾರೆ. ಆಗ ಕೋವಿಡ್ ಹರಡುವುದಿಲ್ಲ ಕಾಂಗ್ರೆಸ್ ಪಕ್ಷದವರು ಕಾರ್ಯಕ್ರಮ ಮಾಡಿದರೆ ಮಾತ್ರ ಸೋಂಕು ಹರಡುತ್ತದೆ ಎನ್ನುವ ಭ್ರಮೆಯಲ್ಲಿ ಜಿಲ್ಲಾಡಳಿತವಿದೆ. ಇಂತಹ ತಾರತಮ್ಯ ನೀತಿಯನ್ನು ಅಧಿಕಾರಿಗಳು ಕೂಡಲೇ ಕೈಬಿಡಬೇಕು.

ಆನೆಗೊಂದಿಯಲ್ಲಿ ಆಯೋಜನೆಯಾಗಿದ್ದ ಅನ್ಸಾರಿ ನಡಿಗೆ ಜನರ ಆಶೀರ್ವಾದ ಕಡೆಗೆ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಅಧಿಕಾರಿಗಳು ನಮಗೆ ಸೂಚನೆ ನೀಡಿದ್ದಾರೆ. ಬಿಜೆಪಿಯ ಮುಖಂಡನೋರ್ವ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಪಡಿಸುವಂತೆ ಅಧಿಕಾರಿಗಳು ಕಾಂಗ್ರೆಸ್ ನವರಿಗೆ ತಾಕೀತು ಮಾಡಿದ್ದಾರೆ. ಗುರುವಾರ ಸಣಾಪುರದಲ್ಲಿ ಶಾಸಕ ಪರಣ್ಣ ಮುನವಳ್ಳಿ ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಸರಕಾರದ ಜಲ ಜೀವನ ಮಿಷನ್ ಕಾಮಗಾರಿಯನ್ನು ಉದ್ಘಾಟನೆ ಮಾಡಿದ್ದಾರೆ ಇವರು ಮಾತ್ರ ಕಾರ್ಯಕ್ರಮ ಮಾಡಬೇಕು.ಕಾಂಗ್ರೆಸ್ ನವರು ಮಾಡಬಾರದು ಎನ್ನುವ ತಾರತಮ್ಯ ನೀತಿಯನ್ನು ಅಧಿಕಾರಿಗಳು ಕೂಡಲೇ ಕೈಬಿಡದಿದ್ದರೆ ಕಾಂಗ್ರೆಸ್ ವತಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಶಾಮೀದ್ ಮನಿಯಾರ್ ತಿಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next