ದಾವಣಗೆರೆ: ಜಿಲ್ಲಾ ಮಟ್ಟದಲ್ಲಿ ವಿಜನ್- 2025 ಕುರಿತ ಅಭಿವೃದ್ಧಿ ಮುನ್ನೋಟದ ಬಗ್ಗೆ ಅಧಿಕಾರಿ, ಜನಪ್ರತಿನಿಧಿಗಳು,
ವಿಷಯತಜ್ಞರು ಇತರರೊಡನೆ ಚರ್ಚಿಸಿ, ರೂಪುರೇಷೆ ನೀಡುವ ಉದ್ದೇಶದ ಕಾರ್ಯಾಗಾರ ಅ. 7ರಂದು ಬಾಪೂಜಿ ಬಿ-ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಮುಂದಿನ 7 ವರ್ಷದಲ್ಲಿ ಸಮಗ್ರ ಅಭಿವೃದ್ಧಿ ದೃಷ್ಟಿಯೊಂದಿಗೆ ರಾಜ್ಯ ಸರ್ಕಾರ ರೂಪಿಸಿರುವ ವಿಜನ್- 2025ಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲೂ ವಿಚಾರ ಸಂಕಿರಣ, ಸಂವಾದ ಏರ್ಪಡಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯಾವಾವ ಕ್ಷೇತ್ರದಲ್ಲಿ ಏನೆಲ್ಲಾ ಕಾರ್ಯಕ್ರಮ ರೂಪಿಸಬಹುದು ಎಂಬುದರ ಬಗ್ಗೆ ಚರ್ಚಿಸಿ, ಒಂದು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಬುಧವಾರ
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶನಿವಾರ ಬೆಳಗ್ಗೆ 9ಕ್ಕೆ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ವಿಜನ್- 2025 ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ರೇಣುಕಾ ಚಿದಂಬರಂ ಇತರರು ಭಾಗವಹಿಸುವರು. ಸಂಜೆ 5.30ರ ವರೆಗೆ ವಿವಿಧ ವಲಯಗಳ ತಜ್ಞರು, ಇತರರು ವಿಸ್ತೃತ ಚರ್ಚೆ ನಡೆಸುವರು ಎಂದು ತಿಳಿಸಿದರು.
ಸಮಗ್ರ ಅಭಿವೃದ್ಧಿ ಕುರಿತ ವಿಜನ್- 2025 ಡಾಕ್ಯುಮೆಂಟ್ ಸಿದ್ಧಪಡಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಕೃಷಿ ಸಂಬಂ ಧಿತ, ಕೈಗಾರಿಕೆ, ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಸೇರಿದಂತೆ 5 ವಲಯ ಗುರುತಿಸಲಾಗಿದೆ. ಕಾರ್ಯಾಗಾರದಲ್ಲಿ ಆಯಾಯ ವಲಯದ ಇಲಾಖಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿ ಗಳು, ತಜ್ಞರನ್ನೊಳಗೊಂಡ ಸಮಿತಿಗಳು ಚರ್ಚಿಸಲಿವೆ ಎಂದು ತಿಳಿಸಿದರು.
ವಿಜನ್- 2025 ಡಾಕ್ಯುಮೆಂಟ್ ಯೋಜನೆಯ ಕುರಿತು ಚರ್ಚೆಗಾಗಿ ಈಗಾಗಲೇ ತಜ್ಞರನ್ನು ಗುರುತಿಸಲಾಗಿದೆ. ಜಿಲ್ಲೆಯ ಮುಂದಿನ ಅಭಿವೃದ್ಧಿ ವಿಚಾರವಾಗಿ ರೂಪಿಸಿರುವ ವಿಜನ್-2025 ಒಂದು ಸರ್ಕಾರ-ಸಾರ್ವಜನಿಕರ ಸಹಭಾಗಿತ್ವ ಯೋಜನೆಯಂತೆ ಎಂದು ತಿಳಿಸಿದರು. ಹಿಂದುಳಿದ ವರ್ಗ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಆರ್. ಗಂಗಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.