Advertisement

ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಎಸ್‌ಡಿಪಿಐ

04:01 PM Jun 23, 2017 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ನಡೆಯು ತ್ತಿರುವ ಕೋಮುಗಲಭೆ, ಅಮಾಯಕರ ಕೊಲೆ ಘಟನೆಗಳನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಜನಪ್ರತಿನಿಧಿಗಳು ವಿಫಲರಾಗಿ ದ್ದಾರೆ. ಅಧಿಕಾರಿಗಳನ್ನು, ಪರಿಸ್ಥಿತಿಯನ್ನು ನಿಯಂತ್ರಿ ಸಲು ಸಾಧ್ಯವಿಲ್ಲದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಎಸ್‌ಡಿಪಿಐ ಹೇಳಿದೆ.

Advertisement

ಗುರುವಾರ ನಗರದ ಎಸ್‌ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್‌ ಮಹಮ್ಮದ್‌ ತುಂಬೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಪ್ರಕ್ಷುಬ್ಧ ವಾತಾವರಣವನ್ನು ಮತ್ತು ಸಂಘ ಪರಿವಾರವನ್ನು ನಿಯಂತ್ರಿಸುವುದು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯಿಂದ ಸಾಧ್ಯವಾಗದಿರುವುದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕು. ಬಂಟ್ವಾಳದ ಅಮ್ಮುಂಜೆಯ ಮಹಮ್ಮದ್‌ ಅಶ್ರಫ್‌ ಕೊಲೆ ಪ್ರಕರಣ ದುಷ್ಕರ್ಮಿಗಳನ್ನು ಮಾತ್ರವಲ್ಲದೇ ಅವರಿಗೆ ಕುಮ್ಮಕ್ಕು ನೀಡಿದವರನ್ನೂ ಬಂಧಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಪೊಲೀಸರು ತಮ್ಮ ಮಾತು ಕೇಳುವುದಿಲ್ಲ ಎಂದು ಹೇಳಿಕೆ ನೀಡಿರುವುದು ಅವರ ಅಸಹಾಯಕತೆಯನ್ನು ತೋರುತ್ತದೆ. ಪೊಲೀಸರು ಸಚಿವರ ಮಾತು ಕೇಳುವುದಿಲ್ಲವೆಂದಾದಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತರರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಲಿ ಎಂದು ಆಗ್ರಹಿಸಿದರು.

ಕೊಲೆಯಾದ ಮುಹಮ್ಮದ್‌ ಅಶ್ರಫ್‌ ಅಮಾಯಕ ವ್ಯಕ್ತಿಯಾಗಿದ್ದು, ಆತನನ್ನು ರೌಡಿಶೀಟರ್‌ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ. ಇಂತಹ ಘಟನೆಗಳಿಂದಾಗಿ ಜನರಲ್ಲಿ ಅಸುರಕ್ಷತಾ ಭಾವನೆ ನಿರ್ಮಾಣವಾಗಿದೆ. ಪೊಲೀಸರು ಕೂಡ ಸಂಘ- ಪರಿವಾರದ ಜತೆ ಶಾಮೀಲಾಗಿರುವ ಬಗ್ಗೆ ಸುಳಿವು ದೊರಕಿದೆ. ಇತ್ತೀಚೆಗೆ ಕಲ್ಲಡ್ಕದಲ್ಲಿ ನಡೆದ ಕಲ್ಲೆಸೆತದಲ್ಲಿ 23 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ. ನಿಷ್ಠಾವಂತ ಅಧಿಕಾರಿಗಳಿದ್ದರೂ ಅವರ ಮಾತು ಕೇಳದ ಪೊಲೀಸರು ಇದ್ದಾರೆ. ಹೀಗಿದ್ದಲ್ಲಿ ದೇಶ ಎಲ್ಲಿಗೆ ಹೋಗುತ್ತದೆ. ಅಶ್ರಫ್‌ ಕೊಲೆ ಪ್ರಕರಣದಲ್ಲಿ ತೊಡಗಿಸಿಕೊಂಡಿರುವವರ ಬಗ್ಗೆ ಇಲಾಖೆಗೆ ಮಾಹಿತಿಯಿದೆ. ಈ ಹಿಂದೆ ಜಲೀಲ್‌ ಕರೋಪಾಡಿ ಕೊಲೆ ಪ್ರಕರಣದಲ್ಲಿ ಅವರ ತಂದೆಯೇ ಹೇಳಿದ ವ್ಯಕ್ತಿಯ ಬಂಧನ ಇನ್ನೂ ನಡೆದಿಲ್ಲ. ಕೊಲೆಗಡುಕರನ್ನು ರಕ್ಷಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು. 

ಎಸ್ಪಿಯವರನ್ನು ಎತ್ತಂಗಡಿ ಮಾಡುವುದು ಇಲ್ಲಿನ ಸಮಸ್ಯೆಗಳಿಗೆ ಪರಿಹಾರವಲ್ಲ. ಅಲ್ಪಸಂಖ್ಯಾಕರು ಮತೀಯತೆ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಮುಸ್ಲಿಮರಲ್ಲಿ ಮತೀಯತೆಯಿಲ್ಲ. ಜಿಲ್ಲೆಯ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಸಂಘ-ಪರಿವಾರ ಜತೆ ನಂಟು ಹೊಂದಿರುವ ಪೊಲೀಸ್‌ ಅಧಿಕಾರಿ, ಸಿಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಶ್ರಫ್‌ ಕಲಾಯಿಯವರ ಹತ್ಯೆ ಸಂಘ ಪರಿವಾರ ಪ್ರಾಯೋಜಿತ ಕೋಮು ಗಲಭೆ ನಡೆಸುವ ಸಂಚಿನ ಭಾಗವಾಗಿದ್ದು, ಪ್ರಸ್ತುತ ಮಹಮ್ಮದ್‌ ಅಶ್ರಫ್ ಅವರ ಪತ್ನಿ ಹಾಗೂ 3 ಮಕ್ಕಳಿಗೆ ಇನ್ನು ಯಾರು ಗತಿ ಎಂಬ ಸ್ಥಿತಿ ಉಂಟಾಗಿದೆ. ಅವರ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. 

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸಿದ್ಧೀಕ್‌ ಪುತ್ತೂರು, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್‌ ಬೆಳ್ಳಾರೆ, ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್‌ ಗೂಡಿನಬಳಿ, ಸಜಿಪನಡು ಗ್ರಾ.ಪಂ. ಅಧ್ಯಕ್ಷ ನಾಸಿರ್‌ ಸಜಿಪ, ಸುಳ್ಯ ನಗರ ಪಂಚಾಯತ್‌ ಸದಸ್ಯ ಉಮರ್‌ ಸುಳ್ಯ, ಬಂಟ್ವಾಳ ಪುರಸಭೆ ಸದಸ್ಯ ಮುನೀಶ್‌ ಬಂಟ್ವಾಳ, ಅಶ್ರಫ್‌ ಸಹೋದರ ಸಾದಿಕ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next