ಮಹಾನಗರ: ಸರಕಾರ ರೈತರಿಗೆ ರಸಗೊಬ್ಬರ ಸಹಿತ ವಿವಿಧ ಸವಲತ್ತುಗಳನ್ನು ಕೊಡುವ ಜತೆಗೆ ಅವರ ಬೆಳೆಗೆ ಉತ್ತಮ ಬೆಲೆಯನ್ನೂ ದೊರಕಿಸಿ ಕೊಡುವ ಕಾರ್ಯ ಮಾಡಬೇಕು. ಮಾರುಕಟ್ಟೆ ಜೀವಂತವಾಗಿದ್ದರೆ ಮಾತ್ರ ರೈತರು ಸ್ವಾಭಿಮಾನಿಗಳಾಗಲು ಸಾಧ್ಯ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಬುಧವಾರ ಪುರಭವನದಲ್ಲಿ ಇಪ್ಕೋ , ಸಹಕಾರ ಇಲಾಖೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಕೃಷಿ ಇಲಾಖೆ, ಸಹಕಾರಿ ಯೂನಿಯನ್ ಹಾಗೂ ಇಪ್ಕೋ ,ಮಾರುತಿ ಸುಝುಕಿ ಸಹಯೋಗದಲ್ಲಿ ನಡೆದ ಜಿಲ್ಲಾ ಸಹಕಾರಿ ರಸಗೊಬ್ಬರ ಮಾರಾಟಗಾರರ ಸಮ್ಮೇಳನ ಹಾಗೂ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಇಪ್ಕೋ ಸಂಸ್ಥೆಯು ದೇಶದ ದೊಡ್ಡ ಸಹಕಾರಿ ಸಂಸ್ಥೆಯಾಗಿದ್ದು, ರೈತರಿಗೆ ನಿರಂತರ ಸಹಕಾರ ನೀಡುತ್ತ ಬಂದಿದೆ. ಜತೆಗೆ ಸಂಸ್ಥೆಯ ಬೆಳವಣಿಗೆಗೆ ಜಿಲ್ಲೆಯ ರೈತರು ಕೂಡ ಪ್ರೋತ್ಸಾಹ ನೀಡಿದ್ದಾರೆ. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೇ ಇದ್ದಾಗ ಅವರು ಇನ್ನೊಂದು ಬೆಳೆಯತ್ತ ವಾಲುತ್ತಾರೆ. ಜಿಲ್ಲೆಯ ರೈತರಿಗೆ ಭತ್ತದ ಬೆಳೆಯಲ್ಲಿ ಲಾಭ ಸಿಗದ ಹಿನ್ನೆಲೆ ಅಡಿಕೆ, ರಬ್ಬರ್ ಕಡೆಗೆ ಮುಖ ಮಾಡಿದರು. ಹೀಗಾಗಿ ಸರಕಾರ ಬೆಂಬಲ ಬೆಲೆ ನೀಡುವ ಕುರಿತು ಯೋಚಿಸಬೇಕು ಎಂದರು.
‘ಪ್ರಸ್ತುತ ನನಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷತೆಯ ಜವಾಬ್ದಾರಿ ನೀಡಲಾಗಿದ್ದು, ಇದರ ಮೂಲಕ ರೈತರ ನೆರವು ನೀಡುವ ಕಾರ್ಯ ಮಾಡಲಿದ್ದೇನೆ. ಬೆಲೆ ಕುಸಿತಕ್ಕೆ ಕಡಿವಾಣ, ಗೋದಾಮು ಸೌಲಭ್ಯಗಳನ್ನು ಒದಗಿಸಿಕೊಡುವ ಕಾರ್ಯಕ್ಕೆ ಪ್ರಯತ್ನಿಸಲಾಗುವುದು’ ಎಂದು ಅವರು ತಿಳಿಸಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಡಾ| ರಾಜೇಂದ್ರಕುಮಾರ್ ಅವರನ್ನು ಇಪ್ಕೋ ವತಿಯಿಂದ ಸಮ್ಮಾನಿಸಲಾಯಿತು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಿಇಒ (ಪ್ರಭಾರ) ಸತೀಶ್ ಎಸ್., ಇಪ್ಕೋ ಮಹಾಸಭಾ ಸದಸ್ಯ ರತ್ನಾಕರ ಶೆಟ್ಟಿ, ಪ್ರಾದೇಶಿಕ ವ್ಯವಸ್ಥಾಪಕ ಡಾ| ನಾರಾಯಣ ಸ್ವಾಮಿ, ಮಾರುತಿ-ಸುಝುಕಿ ರೂರಲ್ ಮಾರ್ಕೆಟಿಂಗ್ ಮ್ಯಾನೇಜರ್ ಕೆ.ವಿ.ಎನ್. ಶರ್ಮಾ, ಹೇಮಂತ್ ಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು. ಇಪ್ಕೋ ರಾಜ್ಯ ಮಾರಾಟ ವ್ಯವಸ್ಥಾಪಕ ಸಿ.ಎಸ್. ಪಾಟೀಲ ಪ್ರಸ್ತಾವನೆಗೈದರು.