Advertisement

ಪತ್ರಕರ್ತರ ಸಮ್ಮೇಳನಕ್ಕೆ ಜಿಲ್ಲಾಡಳಿತದಿಂದ ಸಹಕಾರ

03:20 PM Jul 22, 2019 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬರುವ ಸೆಪ್ಟೆಂಬರ್‌ನಲ್ಲಿ 35ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್‌ ಹೇಳಿದರು.

Advertisement

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಜಿಪಂ ಸಭಾಂಗಣದಲ್ಲಿ ಜರುಗಿದ 35ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಕುರಿತು ಪೂರ್ವಭಾವಿ ಸಭೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪತ್ರಕರ್ತರ ಸಂಘವು 35ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಈ ಬಾರಿ ಜಿಲ್ಲೆಯಲ್ಲಿ ಆಚರಿಸಲು ನಿರ್ಧರಿಸಿದ್ದು, ಈ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಚರಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಸಹಕರಿಸಲಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹಾಗೂ ಅಪೌಷ್ಟಿಕತೆ ವರದಿಗಳು ಹೆಚ್ಚಿವೆ. ಆದ್ದರಿಂದ ಬಾಲ್ಯ ವಿವಾಹ ಪದ್ಧತಿಯನ್ನು ಹೋಗಲಾಡಿಸಲು ಮತ್ತು ಅಪೌಷ್ಟಿಕತೆ ನಿವಾರಿಸಲು ತಾವೆಲ್ಲರೂ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು. ಬಾಲ್ಯ ವಿವಾಹ ತಡೆಗೆ ಹಾಗೂ ಅಪೌಷ್ಟಿಕತೆ ನಿವಾರಿಸಲು ಜನರಿಗೆ ಅಗತ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದ್ದು, ಸಮ್ಮೇಳನದಲ್ಲಿ ಈ ಕುರಿತು ಗೋಷ್ಠಿಗಳನ್ನು ಆಯೋಜಿಸಿ. ಸಮ್ಮೇಳನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಜಿಲ್ಲಾಡಳಿತದೊಂದಿಗೆ ಎಲ್ಲರೂ ಸಹಕರಿಸಿ ಸಮ್ಮೇಳನ ಯಶಸ್ವಿಗೊಳಿಸಿ ಎಂದರು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, 35ನೇ ರಾಜ್ಯಮಟ್ಟದ ಸಮ್ಮೇಳನವನ್ನು ಜಿಲ್ಲೆಯಲ್ಲಿ ನಡೆಸಲು ತೀರ್ಮಾನಿಸಿದೆ. ಸಮ್ಮೇಳನಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ. ರಾಜ್ಯ ವಿವಿಧ ಸಚಿವರು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಅನೇಕ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ವಿವಿಧ ಜಿಲ್ಲೆ, ದೇಶದ ವಿವಿಧ ರಾಜ್ಯಗಳಿಂದ ಮತ್ತು ವಿದೇಶದಿಂದ ಪತ್ರಕರ್ತರು ಹಾಗೂ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾಧಿಕಾರಿ ಹೇಳಿದಂತೆ, ಸಮ್ಮೇಳನದಲ್ಲಿ ಬಾಲ್ಯ ವಿವಾಹ ತಡೆಗೆ ಹಾಗೂ ಅಪೌಷ್ಟಿಕತೆ ನಿವಾರಿಸಲು ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಯಾವುದೇ ನೂನ್ಯತೆಗಳು ಆಗದಂತೆ ಎಲ್ಲರು ಒಟ್ಟುಗೂಡಿ ಈ ಸಮ್ಮೇಳನ ಯಶಸ್ವಿಗೊಳಿಸೋಣ ಎಂದರು.

Advertisement

ಜಿಪಂ ಸಿಇಒ ರಘನಂದನ್‌ ಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಧನಂಜಯ ಬಿ., ಸಂಘದ ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಮ್‌, ಪುಂಡಲೀಕ ಬಾಳ್ಳೋಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯದರ್ಶಿ ಸಂಜೀವರಾವ್‌ ಕುಲಕರ್ಣಿ ಹಾಗೂ ಬಂಗ್ಲೆ ಮಲ್ಲಿಕಾರ್ಜುನ, ಡಾ| ಕೆ. ಉಮೇಶ್ವರ, ದೆಹಲಿ ಸದಸ್ಯ ವಿ.ಆರ್‌. ತಾಳಿಕೋಟಿ, ಎಂ. ಸಾದಿಕ್‌ ಅಲಿ, ಎನ್‌.ಎಂ. ದೊಡ್ಡಮನಿ, ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್‌. ಗೋನಾಳ, ಹರೀಶ ಎಚ್.ಎಸ್‌., ಸಮ್ಮೇಳನದ ಕಾರ್ಯನಿರ್ವಹಣಾ ಉಪಸಮಿತಿ ಅಧ್ಯಕ್ಷ ಸಿರಾಜ್‌ ಬಿಸರಳ್ಳಿ, ಪತ್ರಿಕಾ ಭವನ ನಿರ್ಮಾಣ ಉಪಸಮಿತಿ ಅಧ್ಯಕ್ಷ ಸಿದ್ಧನಗೌಡ ಪಾಟೀಲ ಸೇರಿದಂತೆ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next