ಮಡಿಕೇರಿ: ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಹಾಗೂ ವಿವಿಧ ಗ್ರಾಮಗಳ ಸಂತ್ರಸ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ, ರಾಜ್ಯದ ನೆರೆ ಸಂತ್ರಸ್ತರು ಅಸಹಾಯಕ ಸ್ಥಿತಿಯಲ್ಲಿ ಕಣ್ಣೀರು ಹಾಕುತ್ತಿದ್ದರೂ ಬೆಂಗಳೂರು ವರೆಗೆ ಬಂದ ಪ್ರಧಾನಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಕಾಳಜಿ ತೋರಿಲ್ಲ. ಪ್ರಧಾನಮಂತ್ರಿಗಳು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರಿದ್ದಾರೆ ಎಂದು ಆರೋಪಿಸಿದರು. ಅತ್ಯಧಿಕ ಮತಗಳಿಂದ ಗೆದ್ದಿರುವ ಸಂಸದ ಪ್ರತಾಪ್‌ಸಿಂಹ ಎಲ್ಲಿದ್ದಾರೆ, ಕೊಡಗಿಗಾಗಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ನೆರವಿಗೆ ಬರಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ತಕ್ಷಣ ಎಚ್ಚೆತ್ತುಕೊಂಡು ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಪಕ್ಷದ ವತಿಯಿಂದ ಹೋರಾಟವನ್ನು ತೀವ್ರಗೊಳಿಸುವುದಾಗಿ ಮಂಜುನಾಥ್ ಕುಮಾರ್ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕೆ.ಪಿ.ಸಿ.ಸಿ. ಹಿರಿಯ ಮುಖಂಡ ಮಿಟ್ಟುಚಂಗಪ್ಪ, ಸದಸ್ಯ ಜೋಸೆಫ್ ಶ್ಯಾಂ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಸುರಯ್ಯ ಅಬ್ರಹಾರ್, ರಾಹುಲ್ ಬ್ರಿಗೇಡ್‌ನ ಅಧ್ಯಕ್ಷ ಚುಮ್ಮಿದೇವಯ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಯೋಜಕ ತೆನ್ನಿರಾ ಮೈನಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ಡಿ.ಸಿ.ಸಿ. ಉಪಾಧ್ಯಕ್ಷ ಸುನೀಲ್ ಪತ್ರವೋ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಾರ್ವತಿ ಫ್ಯಾನ್ಸಿ, ಜಿ.ಪಂ. ಸದಸ್ಯರಾದ ಸುನೀತ ಮಂಜುನಾಥ್, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ವೆಂಕಟೇಶ್, ಯತೀಶ್, ಉಸ್ಮಾನ್, ಉದಯ್ ಕುಮಾರ್, ಪವನ್ ಪೆಮ್ಮಯ್ಯ, ಬಾಲಚಂದ್ರ ನಾಯಕ್ ಹಾಗೂ ನೆಲ್ಲಿಹುದಿಕೇರಿ, ಹೊಸ್ಕೇರಿ, ಚೆರಿಯಪರಂಬು ಗ್ರಾಮಗಳ ಸಂತ್ರಸ್ತರು ಪಾಲ್ಗೊಂಡಿದ್ದರು
ಮಳೆಹಾನಿ ಸಂತ್ರಸ್ತರು ಕೂಡ ಅಸಹಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಳೆಹಾನಿ ಸಂತ್ರಸ್ತರು ಕೂಡ ಅಸಹಾಯಕತೆ ವ್ಯಕ್ತಪಡಿಸಿ ಯಾವುದೇ ಪರಿಹಾರ ದೊರೆತ್ತಿಲ್ಲವೆಂದು ಆರೋಪಿಸಿದರು.
ಪ್ರವಾಹ ಪೀಡಿತ ನೆಲ್ಯಹುದಿಕೇರಿಯ ಸಂತ್ರಸ್ತೆ ಸಂಗೀತಾ ಮಾತನಾಡಿ ಕಳೆದ ಒಂದೂವರೆ ತಿಂಗಳಿನಿಂದ ನಾವುಗಳು ಸಂಕಷ್ಟದ ಜೀವನ ಸಾಗಿಸುತ್ತಿದ್ದೇವೆ. ನಮ್ಮನ್ನು ನೋಡಲು ಬರುವವರು ಬರುತ್ತಾರೆ, ಹೋಗುತ್ತಾರಷ್ಟೆ. ಸ್ಥಳ ಪರಿ ಶೀಲನೆಗೆ ಬರುವವರು ಆ ಕ್ಷಣಕ್ಕಷ್ಟೇ ಭರವಸೆ ನೀಡಿ ಹೋಗುತ್ತಿದ್ದಾರೆ. ಆದರೆ ನಮ್ಮ ನೋವನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ ಎಂದದು ಹೇಳಿದರು.
ಯರೂ ಯಾವುದೇ ಪರಿಹಾರ ವನ್ನು ನೀಡಿಲ್ಲ. ಪತಿ ಕೆಲಸಕ್ಕೆ ಹೋಗದೆ ಒಂದೂವರೆ ತಿಂಗಳಾಗಿದೆ, ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲ ಕೇಳುವವರು ಇಲ್ಲ ಚುನಾವಣೆ ಸಂದರ್ಭ ಮಾತ್ರ ಕೈ ಮುಗಿಯುತ್ತಾರೆ ಎಂದು ಸಂಗೀತಾ ಅವರು ಳೇಳಿದರು.
ಮನೆ ಕಳೆದುಕೊಂಡಿರುವ ನಮಗೆ ಮನೆ ಸಿಗುವಲ್ಲಿಯವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ, ಲಾಠಿಚಾರ್ಜ್ ಆದರು ಹೆದರುವುದಿಲ್ಲ ಎಂದು ಸಂಗೀತಾ ಅಸಮಾಧಾನ ವ್ಯಕ್ತಪಡಿಸಿದರು.