Advertisement

ಬಾಲಕಿಯ ಸಮಸ್ಯೆಗೆ ಜಿಲ್ಲಾಧಿಕಾರಿಗಳ ಸ್ಪಂದನೆ

12:10 PM Aug 21, 2022 | Team Udayavani |

ಬಾಗಲಕೋಟೆ: ತಂದೆಯನ್ನು ಕಳೆದುಕೊಂಡು ಸ್ವಂತ ಸೂರು ಇಲ್ಲದೇ ಕೂಲಿ ಮಾಡಿ ತಾಯಿಯ ಜೊತೆ ಬದುಕು ಸಾಗಿಸುತ್ತಿದ್ದ ಬಾಲಕಿ ಪೂಜಾ ಹೂಗಾರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮುಂದೆ ಕಣ್ಣೀರಿಟ್ಟು ತನ್ನ ಅಳಲು ತೋಡಿಕೊಂಡ ಪ್ರಸಂಗ ತಾಲೂಕಿನ ಭಗವತಿಯಲ್ಲಿ ನಡೆಯಿತು.

Advertisement

ಶುಕ್ರವಾರ ತಾಲೂಕಿನ ಭಗವತಿ ಗ್ರಾಮದಲ್ಲಿ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಬಾಲಕಿ ಪೂಜಾ ಹೂಗಾರ ಅಳಲನ್ನು ಜಿಲ್ಲಾಧಿಕಾರಿಗಳು ಆಲಿಸಿದರು. ಅವರ ತಂದೆ ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ಪಡೆದುಕೊಂಡ ಪೂಜಾಳ ತಾಯಿ ಕೂಲಿ ಮಾಡಿ ಬದುಕುತ್ತಿದ್ದಾರೆ. ಸ್ವಂತ ಸೂರು, ಇಲ್ಲದೇ ತೊಂದರೆ ಪಡುತ್ತಿರುವ ಗೋಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸ್ವಂತ ಸೂರು ಹೊಂದಲು ಗ್ರಾಮ ಪಂಚಾಯಿತಿಯಿಂದ ಜಾಗ ನೀಡಲು ತಾಪಂ ಇಒ ಶಿವಾನಂದ ಕಲ್ಲಾಪುರ ಅವರಿಗೆ ಸೂಚಿಸಿದರು. ಕುಟುಂಬಕ್ಕೆ ಪರಿಹಾರ ಒದಗಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಭಗವತಿ ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪೂರ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಲು ತಿಳಿಸಲಾಗಿತ್ತು. ಗ್ರಾಮದಿಂದ ಒಟ್ಟು 37 ಅಹವಾಲು ಸ್ವೀಕರಿಸಲಾಗಿದ್ದು, ಅವುಗಳ ಪರಿಹಾರಕ್ಕೆ ಕ್ರಮವಹಿಸುವ ಮೂಲಕ ಕಾರ್ಯಕ್ರಮದಲ್ಲಿ ಬಗೆ ಹರಿಸಿಕೊಡುವ ಕಾರ್ಯ ನಡೆಯಿತು. ಪಿಂಚಣಿ, ಪಹಣಿ ತಿದ್ದುಪಡಿ, ಜಾನುವಾರು ಆರೋಗ್ಯ ತಪಾಸಣೆ, ಆಯುಷ್ಮಾನ ಕಾರ್ಡ್‌ ಸೇರಿದಂತೆ ಇತರೆ ಸೌಲಭ್ಯಗಳನ್ನು ಕೊಡುವ ಕೆಲಸ ಮಾಡಲಾಯಿತು. ಅಲ್ಲದೇ ಇವುಗಳ ಹೊರತಾಗಿ ಗ್ರಾಮದಲ್ಲಿ ರಸ್ತೆ ಸುಧಾರಣೆ, ಜೇನು ಕೃಷಿಗೆ ಸಹಾಯಧನ, ಹೊಲಕ್ಕೆ ಹೋಗಲು ದಾರಿ, ಮುಗಳೊಳ್ಳಿ ಏತ ನೀರಾವರಿ ಯೋಜನೆಯಿಂದ ಜಮೀನು ಭೂಸ್ವಾಧೀನಕ್ಕೆ ಪರಿಹಾರಧನ, ಶಾಲೆಗಳ ಶೌಚಾಲಯ ವ್ಯವಸ್ಥೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಗ್ರಾಮಸ್ಥರು ಜಿಲ್ಲಾಕಾರಿಗಳ ಮುಂದಿಟ್ಟರು. ಸ್ಥಳದಲ್ಲಿಯೇ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಪರಿಹರಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಮಾಡಿದರು.

ಹೆಚ್ಚುವರಿ ಶಾಲಾ ಕೊಠಡಿಗೆ ಬೇಡಿಕೆ: ಭಗವತಿ ಗ್ರಾಮದಲ್ಲಿ ಕಲಾ ವಿಭಾಗದ ಪದವಿ ಪೂರ್ವ ಕಾಲೇಜಿಗೆ ಕೇವಲ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಅದನ್ನು ಬಳಕೆ ಮಾಡದಂತಾಗಿದೆ. ಒಟ್ಟು 150 ವಿದ್ಯಾರ್ಥಿಗಳಿದ್ದು, ಎರಡು ಕೊಠಡಿ ಬಳಕೆಯಾದರೆ ಉಪನ್ಯಾಸಕರಿಗೆ ಕೂಡ್ರಲು ಕೊಠಡಿ ಇಲ್ಲ. ಇದರಿಂದ ಬಳಕೆಯಾಗದೇ ಸರಕಾರಿ ಪ್ರಾಥಮಿಕ ಶಾಲೆಯಲ್ಲಿಯೇ ತರಗತಿ ನಡೆಸಲಾಗುತ್ತಿದೆ. ಉಪನ್ಯಾಸಕರಿಗೆ ಪ್ರತ್ಯೇಕ ಕೊಠಡಿ ಸೇರಿದಂತೆ ಎರಡು ಕೊಠಡಿಗಳ ಅವಶ್ಯಕತೆ ಇದ್ದು, ಕೊಠಡಿ ಮಂಜೂರಾತಿಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡರು.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕೊಠಡಿ ಮಂಜೂರಾತಿಗೆ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಗ್ರಾಮದ ಸಮಸ್ಯೆ ಆಲಿಸಿದ ನಂತರ ಗ್ರಾಮ ಸಂಚಾರ ನಡೆಸಿದರು. ಗ್ರಾಮದಲ್ಲಿರುವ ಸಮಸ್ಯೆಗಳ ವಸ್ತುಸ್ಥಿತಿಯನ್ನು ಆಲಿಸಿದರು. ಅಲ್ಲದೇ ಅಂಗನವಾಡಿಗೆ ಭೇಟಿ ನೀಡಿ ಮಕ್ಕಳಿಗೆ ಸರಕಾರ ನೀಡುತ್ತಿರುವ ಸೌಲಭ್ಯಗಳು ಸರಿಯಾಗಿ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೇ ಶಾಲಾ ಮಕ್ಕಳ ಜೊತೆಗೆ ಸಂವಾದ ನಡೆಸಿದರು.

Advertisement

ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಗವತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಭೀಮವ್ವ ಮಾದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಜಯಶ್ರೀ ಎಮ್ಮಿ, ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ ಮುಳಗುಂದ, ಅಬಕಾರಿ ಇಲಾಖೆಯ ನಿಂಗನಗೌಡ ಹೊಸಳ್ಳಿ, ಲೋಕೋಪಯೋಗಿ ಇಲಾಖೆಯ ಸಾವಂತ, ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ, ತಹಶೀಲ್ದಾರ್‌ ವಿನಯಕುಮಾರ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಉಪಸ್ಥಿತರಿದ್ದರು.

ವಿವಿಧ ಸೌಲಭ್ಯ ವಿತರಿಸಿದ ಶಾಸಕ ಚರಂತಿಮಠ

6 ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಶಿಷ್ಯವೇತನ, 10 ಜನ ಫಲಾನುಭವಿಗಳಿಗೆ ಸೈಕಲ್‌ ಕುಂಟಿಗೆ ಹಾಗೂ 5 ಜನ ರೈತರಿಗೆ ಮಣ್ಣು ಮಾದರಿ ಕಾರ್ಡ್‌ಗಳನ್ನು ಶಾಸಕ ವೀರಣ್ಣ ಚರಂತಿಮಠ ಅವರು ವಿತರಿಸಿದರು.

ವಿಜ್ಞಾನ ಮಾದರಿ ವೀಕ್ಷಿಸಿದ ಡಿಸಿ

ಜಿಲ್ಲಾಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಭಗವತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮದ ಪ್ರಾಥಮಿಕ, ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳನ್ನು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ ವೀಕ್ಷಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next