Advertisement

ನಿರ್ಲಕ್ಷ್ಯ ತೋರಿದರೆ ಕ್ರಿಮಿನಲ್‌ ಕೇಸ್‌

01:52 AM May 04, 2019 | Team Udayavani |

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕಂಡುಬರಬಹುದಾದ ಎಲ್ಲ ಸಮಸ್ಯೆಗಳು ಮತ್ತು ಸುಗಮ ಸಂಚಾರಕ್ಕೆ ಇರುವ ಅಡಚಣೆ ನಿವಾರಣೆಗೆ ವಾರದೊಳಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ನಿರ್ದೇಶಿಸಿದ್ದಾರೆ. ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸುವುದಾಗಿ ಅವರು ಎಚ್ಚರಿಸಿದ್ದಾರೆ.

Advertisement

ಅವರು ಶುಕ್ರವಾರ ಮಳೆಗಾಲ ಮುಂಜಾಗ್ರತೆ ಕ್ರಮಗಳ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲವೆಡೆ ಹೆದ್ದಾರಿ ಮತ್ತು ಚರಂಡಿ ಕಾಮಗಾರಿ ಪೂರ್ಣಗೊಳ್ಳದೆ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ. ರಿಫ್ಲೆಕ್ಟರ್‌ ಮತ್ತು ಫ‌ಲಕಗಳನ್ನು ಅಳವಡಿಸದೆ ಅಪಾಯವಾಗಬಹುದು. ರಾ.ಹೆ. ಪ್ರಾಧಿಕಾರ ಮತ್ತು ಇಲಾಖೆಗಳು ಕ್ರಮ ಕೈಗೊಳ್ಳಲು ಅವರು ನಿರ್ದೇಶಿಸಿದರು.

ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಮಳೆಗಾಲದಲ್ಲಿ ಸುಗಮ ವ್ಯವಸ್ಥೆಗೆ ಸಂಬಂಧಿಸಿದಂತೆ ಹೆದ್ದಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಕುಂದಾಪುರ ಉಪವಿಭಾಗಾಧಿಕಾರಿಗಳು ಈ ವಿಷಯದಲ್ಲಿ ನಿರಂತರ ಗಮನ ಹರಿಸಲು ಸೂಚಿಸಿದರು.

ಚರಂಡಿ ಸ್ವತ್ಛಗೊಳಿಸಿ
ನಗರ ಮತ್ತು ಗ್ರಾಮಾಂತರಗಳಲ್ಲಿ ಚರಂಡಿ ಮತ್ತು ರಾಜಕಾಲುವೆಗಳ ಹೂಳೆತ್ತಿ, ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಗ್ರಾ.ಪಂ. ಪಿಡಿಒಗಳು ಪರಿಸ್ಥಿತಿಯನ್ನು ನಿಭಾಯಿಸಲು ತಿಳಿಸಿದರು. ರೋಗರುಜಿನ ಹರಡದಂತೆ ಎಚ್ಚರಿಕೆ ವಹಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ತಾಲೂಕು ಕಚೇರಿಗಳಲ್ಲಿ ಕಂಟ್ರೋಲ್‌ ರೂಂಗಳನ್ನು ದಿನದ 24 ಗಂಟೆ ತೆರೆದಿಡಬೇಕು. ಅರಣ್ಯ ಇಲಾಖೆಯು ಮರಗಳು ಉರುಳಿದಾಗ ತತ್‌ಕ್ಷಣ ಸ್ಪಂದಿಸಿ ತೆರವುಗೊಳಿಸಬೇಕು ಎಂದರು.

ಆರೋಗ್ಯ ಇಲಾಖೆಗೆ ಸೂಚನೆ
ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಔಷಧ, ಚುಚ್ಚುಮದ್ದು ಇತ್ಯಾದಿ ಸಂಗ್ರಹಿಸಿಡಬೇಕು. ಆರೋಗ್ಯ ಇಲಾಖೆಯ ಕಂಟ್ರೋಲ್‌ ರೂಂಗಳನ್ನು ದಿನವಿಡೀ ತೆರೆದು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸನ್ನದ್ಧರಾಗಿರುವಂತೆ ಸೂಕ್ತ ನಿರ್ದೇಶನ ನೀಡಬೇಕು. ಮಳೆಗಾಲದಲ್ಲಿ ಮಾನವ ಅಸಹಜ ಸಾವು ಸಂಭವಿಸಿದರೆ ಮರಣೋತ್ತರ ವರದಿಯನ್ನು ಕೂಡಲೇ ಒದಗಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

Advertisement

ವಿದ್ಯುತ್‌ ಅಡಚಣೆ: ನಿರ್ದೇಶನ
ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್‌ ಸ್ಥಗಿತಗೊಂಡರೆ ತತ್‌ಕ್ಷಣವೇ ಮರುಸಂಪರ್ಕ ಬಗ್ಗೆ ಕ್ರಮ ಕೈಗೊಳ್ಳುವಂತೆ, ತುರ್ತು ಕೆಲಸಗಳ ನಿರ್ವಹಣೆಗಾಗಿ ಕಂಟ್ರೋಲ್‌ ರೂಮ್‌ ತೆರೆದು ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಿಳಿಸಲು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.

ಕಿಂಡಿ ಅಣೆಕಟ್ಟು: ಸೂಚನೆ
ತಗ್ಗು ಪ್ರದೇಶಗಳಲ್ಲಿ, ಸೇತುವೆ ಬದಿಗಳಲ್ಲಿ, ನದಿ ದಂಡೆಗಳು ಶಿಥಿಲಾವಸ್ಥೆಯಲ್ಲಿರುವುದನ್ನು ಪತ್ತೆ ಹಚ್ಚಿ ಸಂರಕ್ಷಣೆ ಕೈಗೊಳ್ಳಲು ಮತ್ತು ಮಳೆಗಾಲದಲ್ಲಿ ನದಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಕಿಂಡಿ ಅಣೆಕಟ್ಟುಗಳ ಗೇಟುಗಳನ್ನು ತೆರವುಗೊಳಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೂಡಲೇ ಪರಿಹಾರ ವಿತರಣೆ
ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪರಿಹಾರವನ್ನು ತಹಶೀಲ್ದಾರರು ಕೂಡಲೇ ನೀಡಬೇಕು. ತುರ್ತು  ವಿಪತ್ತು ನಿರ್ವಹಣೆಗಾಗಿ ಕಂಟ್ರೋಲ್‌ ರೂಮ್‌ ತೆರೆಯಬೇಕು. ತಾಲೂಕುಗಳಲ್ಲಿ ಲಭ್ಯ ಬೋಟುಗಳ ಮತ್ತು ಈಜುಗಾರರ ಬಗ್ಗೆ ಸಂಪೂರ್ಣ ಮಾಹಿತಿ ಸಿದ್ಧಪಡಿಸಬೇಕು ಎಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್‌, ಎಸ್‌ಪಿ ನಿಶಾ ಜೇಮ್ಸ್‌, ಎಡಿಸಿ ವಿದ್ಯಾಕುಮಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋರೆಯಲ್ಲಿ ಅವಘಡ:
ಕ್ರಿಮಿನಲ್‌ ಕೇಸ್‌
ಕಲ್ಲುಕೋರೆ ಮತ್ತು ಗಣಿಗಾರಿಕೆ ಪ್ರದೇಶದ ಗುಂಡಿಗಳ ನಿಂತ ನೀರಿನಲ್ಲಿ ಈಜಾಡಲು ಹೋಗುವುದರಿಂದ ಜೀವಹಾನಿಗಳಾಗುತ್ತವೆ. ಇಂಥಲ್ಲಿ ಎಚ್ಚರಿಕೆ ಫ‌ಲಕ ಅಳವಡಿಸಬೇಕು. ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಗಣಿ ಮಾಲಕರು/ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ನಿರ್ದೇಶಿಸಿದರು.

ದೂರುಗಳಿಗೆ ತುರ್ತು ಸ್ಪಂದನೆ
ಎಲ್ಲ ಇಲಾಖೆ, ಕಚೇರಿಗಳಲ್ಲಿ ಮಳೆಗಾಲ ತುರ್ತು ವಿಪತ್ತು ನಿರ್ವಹಣೆಗಾಗಿ ಕಂಟ್ರೋಲ್‌ ರೂಮ್‌ ತೆರೆದು 24 ಗಂಟೆ ಕರ್ತವ್ಯ ನಿರ್ವಹಿಸಲು ಸಿಬಂದಿ ನಿಯೋಜಿಸಬೇಕು, ದೂರುಗಳಿಗೆ ಕ್ಷಿಪ್ರವಾಗಿ ಪ್ರತಿಸ್ಪಂದಿಸುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಮಕ್ಕಳ ಈಜಾಟ: ಎಚ್ಚರಿಕೆ
ಶಿಕ್ಷಣ ಇಲಾಖೆಯು ಮಳೆಗಾಲದ ತುರ್ತು ಸಂದರ್ಭಗಳಲ್ಲಿ ಅಗತ್ಯವಿದ್ದಾಗ ಗಂಜಿ ಕೇಂದ್ರಗಳ ಸ್ಥಾಪನೆ ವ್ಯವಸ್ಥೆಗೆ ಸೂಕ್ತ ಶಾಲಾ ಕಟ್ಟಡಗಳನ್ನು ಒದಗಿಸಬೇಕು. ಮಳೆಗಾಲದಲ್ಲಿ ಈಜಾಡಲು ಹೋಗಿ ಶಾಲಾ ಮಕ್ಕಳು ಮೃತರಾಗುತ್ತಿರುವುದರಿಂದ ಈ ಮಳೆಗಾಲದ ರಜಾ ದಿನಗಳಂದು ಮಕ್ಕಳ ಮೇಲೆ ನಿಗಾ ವಹಿಸುವಂತೆ ಶಾಲಾರಂಭ ಸಮಯದಲ್ಲಿ ಮಕ್ಕಳಿಗೆ ಮತ್ತು ಪೋಷಕರ ಸಭೆ ನಡೆಸಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಬೋಟುಗಳ ಸಿದ್ಧತೆ
ಅಗ್ನಿ ಶಾಮಕ ದಳವು ರಕ್ಷಣಾ ಸಾಮಗ್ರಿಯೊಂದಿಗೆ ಸನ್ನದ್ಧರಾಗಿರಬೇಕು. ನೆರೆ ಉಂಟಾದಲ್ಲಿ ಬೋಟುಗಳನ್ನು ಸಿದ್ಧವಾಗಿರಬೇಕೆಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next