ಹಾವೇರಿ: ತಾಲೂಕಿನ ಬಸಾಪುರದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಶನಿವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಭೇಟಿ ನೀಡಿ, ಮೂಲ ಸೌಕರ್ಯಗಳ ಪರಿಶೀಲನೆಯ ಜೊತೆಗೆ ಕ್ವಾರಂಟೈನ್ ಆಗಿರುವ ವ್ಯಕ್ತಿಗೊಂದಿಗೆ ಸಂವಾದ ನಡೆಸಿದರು.
ಊಟ, ಕುಡಿಯುವ ನೀರು, ಹೊದಿಕೆ, ಶೌಚಾಲಯ ಸ್ವತ್ಛತೆ, ಚಿಕಿತ್ಸಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಜಿಲ್ಲಾ ಧಿಕಾರಿಗಳು, ನಂತರ ಕ್ವಾರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳೊಂದಿಗೆ ಮಾತನಾಡಿದರು. ಯಾವುದೇ ಕೊರತೆಗಳಿದ್ದರೂ ಗಮನಕ್ಕೆ ತನ್ನಿ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮಾನಸಿಕ ಒತ್ತಡಗಳಿಂದ ಮುಕ್ತವಾಗಿ ತ್ವರಿತವಾಗಿ ಗುಣಮುಖರಾಗಿ. ನಿಮಗೆ ಅಗತ್ಯ ಸೇವೆಗಳನ್ನು ಕಲ್ಪಿಸಲಾಗುವುದು ಎಂದು ಆತ್ಮವಿಶ್ವಾಸ ತುಂಬಿದರು.
ಇದೇ ಸಂದರ್ಭದಲ್ಲಿ 14 ದಿನ ಪೂರೈಸಿದವರನ್ನು ನಿಯಮಾನುಸಾರ ಬಿಡುಗಡೆಗೊಳಿಸುವಂತೆ ಸಲಹೆ ನೀಡಿದರು. ಯಾವುದೇ ಕೊರತೆಯಾಗದಂತೆ ಕ್ರಮ ವಹಿಸಬೇಕು. ಸಮಯಕ್ಕೆ ಸರಿಯಾಗಿ ನಿಯಮಾನುಸಾರ ಪೌಷ್ಟಿಕ ಆಹಾರ ವಿತರಿಸುವಂತೆ ಸಲಹೆ ನೀಡಿದರು.
ವೈದ್ಯರ ಸಂದರ್ಶನಕ್ಕೆ ಸೂಚನೆ: ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ, ಕೋವಿಡ್ ವಾರ್ಡ್ ಗಳಲ್ಲಿ ಸೌಲಭ್ಯಗಳ ಕುರಿತಂತೆ ಪರಿಶೀಲನೆ ನಡೆಸಿದರು. ಕಡ್ಡಾಯವಾಗಿ ವೈದ್ಯರು ವಾರ್ಡ್ ಗಳಿಗೆ ಭೇಟಿ ನೀಡಬೇಕು. ಪಾಸಿಟಿವ್ ವ್ಯಕ್ತಿಗಳಿಗೆ ಕಾಲಕಾಲಕ್ಕೆ ಔಷಧೋಪಚಾರದ ಜೊತೆಗೆ ಅವರೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಬೇಕು. ಸೋಂಕಿತರಲ್ಲಿ ಯಾವುದೇ ಆತಂಕ ಮತ್ತು ಭಯ ಇರಬಾರದು. ವೈದ್ಯರೇ ಖುದ್ದಾಗಿ ಭೇಟಿ ನೀಡಿ ಸಲಹೆ ನೀಡಬೇಕೆಂದು ಸೂಚನೆ ನೀಡಿದರು.
ಸೆಂಟ್ರಲೈಸ್, ಪ್ರಸರೈಸ್ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳಿಗೆ ಸಕಾಲಕ್ಕೆ ಊಟ, ಉಪಾಹಾರದ ಜೊತೆಗೆ ಕಾಲಕಾಲಕ್ಕೆ ಔಷ ಧಗಳ ವಿತರಣೆ, ವಾರ್ಡ್‌ಗಳ ಸ್ವಚ್ಛತೆ, ಬಿಸಿ ನೀರಿನ ವ್ಯವಸ್ಥೆಯಲ್ಲಿ ವ್ಯತ್ಯಯವಾಗಬಾರದು. ಆಸ್ಪತ್ರೆಗೆ ದಾಖಲಿಸಲಾಗುವಾಗ ಹಾಗೂ ಬಿಡುಗಡೆ ಸಂದರ್ಭದಲ್ಲಿ ತಕ್ಷಣವೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಕೋವಿಡ್ ಕೇಂದ್ರಗಳಲ್ಲಿ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ವಹಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪಿ.ಎಸ್.ಹಾವನೂರ ಇತರರು ಇದ್ದರು.