ಬೆಳ್ಮಣ್: ಹಾಲಿನ ಗುಣಮಟ್ಟ, ದರ, ಲಾಭಾಂಶ ಹಾಗೂ ವ್ಯವಹಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲಿಯೇ ಒಂದನೇ ಸ್ಥಾನದಲ್ಲಿದೆಯೆಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
ಅವರು ಶುಕ್ರವಾರ ಕಾರ್ಕಳದ ಪ್ರಕಾಶ್ ಹೊಟೇಲ್‌ನಲ್ಲಿ ನಡೆದ ಕಾರ್ಕಳ ತಾಲೂಕು ಹಾಲು ಉತ್ಪಾದಕರ ಸಂಘಗಳ ಆಧ್ಯಕ್ಷ-ಕಾರ್ಯದರ್ಶಿಗಳ ಸಮಾಲೋಚನಾ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಒಕ್ಕೂಟದಿಂದ ಹೈನುಗಾರರಿಗೆ ವಿಶೇಷ ಯೋಜನೆಗಳನ್ನು ಪ್ರಾರಂಭಿಸಲಾಗಿದ್ದು ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರವೂ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆಯೆಂದ ಅವರು ಒಕ್ಕೂಟದ ವ್ಯವಹಾರದ ಆಂಕಿ ಅಂಶಗಳನ್ನು ವಿವರಿಸಿದರು. ಉತ್ತಮ ಗುಣಮಟ್ಟದ ಹಾಲು ನೀಡುವ ಹೈನುಗಾರ ಎಂದೂ ಸೋಲಲಾರ ಎಂದು ಪ್ರೇರಣೆ ನೀಡಿದರು.
ಇದೇ ಸಂದರ್ಭ ತಾ| ಮಟ್ಟದ ಪ್ರಶಸ್ತಿ ಪುರಸ್ಕೃತ ಸಂಘಗಳನ್ನು, ಹೈನುಗಾರರನ್ನು ಗುರುತಿಸಲಾಯಿತು.ಅಧಿಕ ಅಂಕ ಗಳಿಸಿದ ಹೈನುಗಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಒಕ್ಕೂಟದ ನಿರ್ವಾಹಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ, ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಉದಯ ಎಸ್. ಕೋಟ್ಯಾನ್, ನವೀನಚಂದ್ರ ಜೈನ್, ಜಾನಕಿ ಹಂದೆ, ಅಶೋಕ್ ಕುಮಾರ ಶೆಟ್ಟಿ,ಸೂರ್ಯ ಶೆಟ್ಟಿ, ಡೈರಿ ಮೆನೇಜರ್ ಡಾ| ನಿತ್ಯಾನಂದ ಭಕ್ತ, ಶಿವಶಂಕರ ಸ್ವಾಮಿ, ಡಾ| ಆನಿಲ್ ಕುಮಾರ್ ಶೆಟ್ಟಿ ಮತ್ತಿತರರಿದ್ದರು. ಉದಯ ಕೋಟ್ಯಾನ್ ಸ್ವಾಗತಿಸಿ, ನವೀನಚಂದ್ರ ಜೈನ್ ವಂದಿಸಿದರು. ಶಂಕರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.