Advertisement

ವಿಶ್ವ ರಕ್ತದಾನಿಗಳ ದಿನದಂದು ಜಿಲ್ಲೆಯಲ್ಲಿ ರಕ್ತದ ಕೊರತೆ!

10:44 PM Jun 13, 2020 | Sriram |

ಉಡುಪಿ: ರಾಜ್ಯದಲ್ಲಿ ರಕ್ತದಾನಿಗಳ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉಡುಪಿ ಜಿಲ್ಲೆ ಇಂದು ರಕ್ತದ ಕೊರತೆಯನ್ನು ಎದುರಿಸುತ್ತಿದೆ, ತುರ್ತು ರಕ್ತ ಕೇಳಿ ಬಂದವರು ಬರಿ ಕೈಯಲ್ಲಿ ಹಿಂದಿರುಗುವ ಪರಿಸ್ಥಿತಿ ಎದುರಾಗಿದೆ. ಜೂ. 14ರಂದು ರಕ್ತದಾನಿಗಳ ದಿನಾಚರಣೆ ನಡೆಯುತ್ತಿರುವಾಗಲೇ ಈ ಪರಿಸ್ಥಿತಿ ಬಂದಿದೆ.

Advertisement

ಶೇ.90ರಷ್ಟು ಕುಸಿತ
ಕೋವಿಡ್‌-19 ವೈರಸ್‌ನಿಂದಾಗಿ ಮಾರ್ಚ್‌ ಅಂತ್ಯದಲ್ಲಿ ಇಡೀ ದೇಶವನ್ನೆ ಲಾಕ್‌ಡೌನ್‌ ಮಾಡಲಾಗಿತ್ತು. ಇದರಿಂದಾಗಿ ಜಿಲ್ಲೆಯ ರಕ್ತನಿಧಿಯಲ್ಲಿ ರಕ್ತದ ಕೊರತೆ ಉಂಟಾಗಿದೆ. ಪ್ರಸ್ತುತ ತುರ್ತು ರಕ್ತದ ಪೂರೈಕೆಗೆ ರಕ್ತನಿಧಿ ಕೇಂದ್ರಗಳು ಹರಸಾಹಸಪಡುವಂತಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಸ್ವಯಂಪ್ರೇರಿತ ರಕ್ತದಾನ ಕ್ಯಾಂಪ್‌ ಗಳು ನಡೆಯದ ಕಾರಣದಿಂದ ರಕ್ತದ ಸಂಗ್ರಹವಾಗುವ ಪ್ರಮಾಣ ಶೇ. 90ಕ್ಕೆ ಕುಸಿಯುವ ಮೂಲಕ ರಕ್ತದ ಕೊರತೆ ಎದುರಿಸುವಂತಾಗಿದೆ.

ಶೇ.80 ರಕ್ತದ ಕೊರತೆ
ಜಿಲ್ಲಾಸ್ಪತ್ರೆಯಲ್ಲಿ ಇರುವ ರಕ್ತ ನಿಧಿಯಿಂದ ಭಟ್ಕಳ, ಉಡುಪಿ, ಕಾರ್ಕಳ, ಬಿ.ಆರ್‌. ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ರಕ್ತದ ಪೂರೈಕೆ ಆಗುತ್ತದೆ. ಲಾಕ್‌ಡೌನ್‌ ಪೂರ್ವದಲ್ಲಿ ತಿಂಗಳಿಗೆ ಸುಮಾರು 1,000 ಯುನಿಟ್‌ ರಕ್ತ ಸಂಗ್ರಹವಾಗುತ್ತಿದ್ದು, ನಿತ್ಯ ಸರಾಸರಿ 50, 60 ಯುನಿಟ್‌ ಸಂಗ್ರಹವಾಗುತ್ತಿತ್ತು. ಆದರೆ ಸದ್ಯ ಇದರ ಶೇ. 20ರಷ್ಟು ಕೂಡ ರಕ್ತ ಸಂಗ್ರಹವಾಗುತ್ತಿಲ್ಲ. ಲಾಕ್‌ಡೌನ್‌ನಿಂದ ಮಾರ್ಚ್‌ನಲ್ಲಿ 528 ಯುನಿಟ್‌, ಎಪ್ರಿಲ್‌21ರ ವರೆಗೆ ಸುಮಾರು 148 ಯುನಿಟ್‌ ಸಂಗ್ರಹವಾಗಿತ್ತು. ರಕ್ತನಿಧಿ ಕೇಂದ್ರದಲ್ಲಿ ಜೂ.11ರಂದು ಸಂಗ್ರಹವಾಗಿದ್ದ ರಕ್ತ ದಾಸ್ತಾನು ಖಾಲಿಯಾಗಿದೆ.

ನಿತ್ಯ 20 -30 ಯುನಿಟ್‌ ಸಂಗ್ರಹ!
ಮಣಿಪಾಲ ಕೆಎಂಸಿಯ ರಕ್ತನಿಧಿಯಲ್ಲಿ ಕ್ಯಾಂಪ್‌ ಮತ್ತು ಸ್ವಯಂಪ್ರೇರಿತ ರಕ್ತದಾನಿಗಳಿಂದ ಪ್ರತಿ ವಾರ 300 ಯುನಿಟ್‌ ರಕ್ತ ಸಂಗ್ರಹವಾಗುತ್ತಿತ್ತು. ಆದರೆ ಲಾಕ್‌ಡೌನ್‌ ಬಳಿಕ ಕೆಎಂಸಿಯಲ್ಲಿ ನಿತ್ಯ 20-30 ಯುನಿಟ್‌ ರಕ್ತ ಸಂಗ್ರಹವಾಗುತ್ತಿದೆ. ಕೆಎಂಸಿ ರಕ್ತನಿಧಿ ಕೇಂದ್ರ ಮುಂದಿನ ದಿನದಲ್ಲಿ ಸಾಮಾಜಿಕ ಅಂತರ ಹಾಗೂ ಸರಕಾರದ ನಿಯಮ ಪಾಲಿಸಿಕೊಂಡು ರಕ್ತದಾನ ಶಿಬಿರವನ್ನು ಆರಂಭಿಸಲಿದೆ.

ರಕ್ತ ನೀಡಲು ಮುಂದಾದ ಸಿಬಂದಿ
ಜಿಲ್ಲೆಯಲ್ಲಿ ರಕ್ತದ ಕೊರತೆ ಎದುರಾಗಿ ರುವುದರಿಂದ ಜಿಲ್ಲಾ ರಕ್ತ ನಿಧಿಯಿಂದ ಸಂದೇಶ ಬಂದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ತೆಳ್ಳಾರ್‌ ಗಾಜ್ರಿಯ ಸ್ಟೆಷಾಲಿಟಿ ಆಸ್ಪತ್ರೆಯ ಸುಮಾರು 30 ಸಿಬಂದಿ ಮುಂದೆ ಬಂದು ರಕ್ತವನ್ನು ನೀಡಿದ್ದಾರೆ. ಆ ಮೂಲಕ ಜಿಲ್ಲಾ ರಕ್ತ ನಿಧಿ ಕೇಂದ್ರಕ್ಕೆ ಸುಮಾರು 30ರಿಂದ 50 ಯುನಿಟ್‌ ವರೆಗೆ ರಕ್ತ ಸಂಗ್ರಹಿಸಿ ನೀಡಲಾಗಿದೆ. ಆಸ್ಪತ್ರೆಯಲ್ಲಿ ತುರ್ತು ರಕ್ತ ಬೇಕಾದವರಿಗೆ ಸಿಬಂದಿ ನೀಡಿದ್ದಾರೆ ಎಂದು ಆಸ್ಪತ್ರೆ ಪಿಆರ್‌ಒ ಶುಭಕರ್‌ ಅಂಚನ್‌ ತಿಳಿಸಿದರು.

Advertisement

ಪ್ರತಿನಿತ್ಯ 70 ಯುನಿಟ್‌ ರಕ್ತದ ಆವಶ್ಯಕತೆ ಇದೆ. ಮುಂದಿನ ದಿನಗಳ ಸಾಮಾಜಿಕ ಅಂತರ ಹಾಗೂ ಸರಕಾರದ ಆದೇಶವನ್ನು ಪಾಲಿಸಿಕೊಂಡು ರಕ್ತ ಸಂಗ್ರಹ ಮಾಡಲಾಗುತ್ತದೆ. ಪ್ರತಿನಿತ್ಯ 20ರಿಂದ 30 ಯುನಿಟ್‌ ಸಂಗ್ರಹವಾಗುತ್ತಿದೆ.
-ಡಾ| ಶಮಿ ಶಾಸ್ತ್ರಿ, ಮುಖ್ಯಸ್ಥರು, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ರಕ್ತನಿಧಿ.

ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಬೇಡಿಕೆ ಹೆಚ್ಚಿದೆ. ನಮ್ಮಲ್ಲಿ ಕಡಿಮೆ ದರದಲ್ಲಿ ರಿಪ್ಲೇಸ್‌ಮೆಂಟ್‌ ಇಲ್ಲದೆ ರಕ್ತವನ್ನು ನೀಡಲಾಗುತ್ತಿದೆ. ಆದ್ದರಿಂದ ಈಗ ಇರುವ ರಕ್ತದ ಕೊರತೆ ನೀಗಿಸಲು ದಾನಿಗಳ ಮುಖಾಂತರ ಯತ್ನಿಸಲಾಗುತ್ತಿದೆ. ಇದೀಗ ಕೆಲ ಕಡೆಗಳಿಂದ ದಾನಿಗಳು ಬರುತ್ತಿದ್ದಾರೆ.
-ಡಾ| ವೀಣಾ ಕುಮಾರಿ, ಮುಖ್ಯಸ್ಥರು,
ಜಿಲ್ಲಾಸ್ಪತ್ರೆ ರಕ್ತನಿಧಿ, ಕೇಂದ್ರ ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next