Advertisement
ಸದ್ಯ ತಾ.ಪಂ. ರದ್ದತಿಯ ಬಗ್ಗೆ ಪರ- ವಿರೋಧ ಚರ್ಚೆ ನಡೆದಿದ್ದು, ಕೇಂದ್ರ ಸರಕಾರಕ್ಕೆ ಈ ಸಂಬಂಧ ಶಿಫಾರಸು ಕಳುಹಿಸಲು ಸರಕಾರ ತಯಾರಿ ನಡೆಸಿದೆ. ಇದರ ಮಧ್ಯೆ ಈಗ ರಾಜ್ಯ ಚುನಾವಣ ಆಯೋಗವು ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಗೆ ಕೈಹಾಕಿದೆ. ಇದು ಅವಧಿಯೊಳಗೆ ಮುಗಿಯುವುದೇ ಎಂಬ ಅನುಮಾನ ಮೂಡಿದೆ.
ಈ ಮೇ- ಜೂನ್‌ಗೆ ಜಿ.ಪಂ. ಮತ್ತು ತಾ.ಪಂ.ಗಳ ಅವಧಿ ಮುಗಿಯಲಿದೆ. ಎಪ್ರಿಲ್ ವೇಳೆಗೆ ಚುನಾವಣೆ ಮುಗಿದು ಹೊಸ ಸದಸ್ಯರು ಆಯ್ಕೆಯಾಗಬೇಕು. ಇಂಥ ಸಮಯದಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೊದಲು ಇದು ಮುಗಿಯಬೇಕು. ಬಳಿಕ ಮೀಸಲಾತಿ ನಿಗದಿಯಾಗಬೇಕು. ಮೀಸಲಾತಿಗೆ ಕರಡು ಮಾರ್ಗಸೂಚಿಗಳನ್ನು ಈಗಷ್ಟೇ ಹೊರಡಿಸಿರುವ ಸರಕಾರ, ಆಕ್ಷೇಪಣೆಗೆ 30 ದಿನಗಳ ಕಾಲಾವಕಾಶ ನೀಡಿದೆ. ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡ 45 ದಿನಗಳ ಬಳಿಕ ಚುನಾವಣೆಗೆ ದಿನಾಂಕ ಘೋಷಣೆಯಾಗಬೇಕು. ಇವುಗಳನ್ನೆಲ್ಲ ಗಮನಿಸಿದರೆ ನಿಗದಿತ ಅವಧಿಯೊಳಗೆ ಜಿ.ಪಂ., ತಾ.ಪಂ. ಚುನಾವಣೆ ನಡೆಯುವುದು ಅನುಮಾನ. ಕ್ಷೇತ್ರ ಪುನರ್‌ವಿಂಗಡಣೆಗೆ 3 ದಿನ
ರಾಜ್ಯದ 31 ಜಿಲ್ಲೆಗಳು ಮತ್ತು 229 ತಾಲೂಕುಗಳ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆ ಸಂಬಂಧ ಚುನಾವಣ ಆಯೋಗವು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ಹೊರಡಿಸಿದೆ. ಫೆ. 19, 20 ಮತ್ತು 22ರಂದು ಕ್ರಮವಾಗಿ ತಲಾ 10 ಜಿಲ್ಲೆಗಳಿಗೆ ಕ್ಷೇತ್ರ ಪುನರ್ ವಿಂಗಡಣೆ ದಿನಾಂಕ ನಿಗದಿಪಡಿಸಲಾಗಿದೆ. ಇಷ್ಟೊಂದು ಅಲ್ಪ ಅವಧಿಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಳಿಸುವುದು ಸವಾಲಿನ ಕೆಲಸ.
Related Articles
ಪುನರ್‌ವಿಂಗಡಣೆ ಆರಂಭವಾಗುತ್ತಿರುವಂತೆಯೇ ಹೊಸ ತಾಲೂಕುಗಳ ರಚನೆ ಕುರಿತ ಅಧಿಸೂಚನೆಯನ್ನು ಸರಕಾರ ಹೊರಡಿಸುತ್ತಿರುವುದು ಚುನಾವಣ ಆಯೋಗವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆಯೋಗ ಸೂಚನೆ ಹೊರಡಿಸಿದ ಬಳಿಕ ಮೈಸೂರು ಜಿಲ್ಲೆಯ ಸಾಲಿಗ್ರಾಮ, ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಉಳ್ಳಾಲ ತಾಲೂಕು ರಚನೆಗೆ ಚಾಲನೆ ಸಿಕ್ಕಿದೆ.
Advertisement
ಕ್ಷೇತ್ರಗಳ ಏರಿಳಿತಕ್ಕೆ ಕಾರಣಪಂ.ರಾಜ್ ಕಾಯ್ದೆ ತಿದ್ದುಪಡಿ ಪರಿಣಾಮ ಪ್ರತೀ 12,500ರಿಂದ 15 ಸಾವಿರ ಜನಸಂಖ್ಯೆಗೆ ಒಂದು ತಾ.ಪಂ. ಕ್ಷೇತ್ರ ಮತ್ತು ಪ್ರತೀ 35 ಸಾವಿರ ಜನಸಂಖ್ಯೆಗೆ ಒಂದು ಜಿ.ಪಂ. ಕ್ಷೇತ್ರ ನಿಗದಿಪಡಿಸಬೇಕಿದೆ. ಹಾಗಾಗಿ ತಾಲೂಕುಗಳ ಸಂಖ್ಯೆ ಹೆಚ್ಚಿದ್ದರೂ ತಾ.ಪಂ. ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿದೆ. ಕೆಲವು ಗ್ರಾ.ಪಂ.ಗಳು ಪಟ್ಟಣ ಪಂಚಾಯತ್‌ಗಳಾಗಿ ಮೇಲ್ದರ್ಜೆಗೇರಿದ ಕಾರಣ ಆ ಪ್ರದೇಶಗಳು ತಾ.ಪಂ. ಮತ್ತು ಜಿ.ಪಂ. ವ್ಯಾಪ್ತಿಯಿಂದ ಹೊರಗೆ ಹೋಗುತ್ತವೆ. ಇದನ್ನು ಹೊರತುಪಡಿಸಿ ಕ್ಷೇತ್ರಗಳ ಏರಿಳಿತಕ್ಕೆ ಬೇರೆ ಯಾವುದೇ ಕಾರಣ ಇಲ್ಲ. ಜಿ.ಪಂ. ಮತ್ತು ತಾ.ಪಂ. ಕ್ಷೇತ್ರ ಪುನರ್ ವಿಂಗಡಣೆ ಕುರಿತ ಪಟ್ಟಿ ಸಿದ್ಧಪಡಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೂರ್‍ನಾಲ್ಕು ದಿನ ಸಮಯ ನೀಡಲಾಗಿದೆ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆಗಲಿದ್ದು, ಅಂತಿಮಗೊಂಡ ಬಳಿಕ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಲಿದೆ. ಚುನಾವಣೆಗೆ ಆಯೋಗ ಸಿದ್ಧತೆಗಳನ್ನು ಮಾಡಿಕೊಂಡಿದೆ.
– ಎಸ್. ಹೊನ್ನಾಂಬ, ರಾಜ್ಯ ಚುನಾವಣ ಆಯೋಗದ ಕಾರ್ಯದರ್ಶಿ – ರಫೀಕ್ ಅಹ್ಮದ್