ಬಾಗಲಕೋಟೆ: ಮೂತ್ರಪಿಂಡ ವೈಫಲ್ಯದಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 47 ರೋಗಿಗಳು ಸೇರಿದಂತೆ ಒಟ್ಟು 105 ರೋಗಿಗಳು ಉಚಿತ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ ತಿಳಿಸಿದ್ದಾರೆ.
2010ರಲ್ಲಿ ಆರಂಭಗೊಂಡ ಡಯಾಲಿಸಿಸ್ ಘಟಕ ಏಪ್ರಿಲ್ 2017ರಿಂದ ಕೊಲ್ಕತ್ತಾದ ಎಸ್ಕಾನ್ ಸಂಜೀವಿನಿ ಇವರಿಗೆ ಖಾಸಗಿ ನಿರ್ವಹಣೆಗೆ ನೀಡಲಾಯಿತು. ದಿನ ನಿತ್ಯದ ಜಂಜಾಟದ ಒತ್ತಡದ ಜೀವನದಲ್ಲಿ ತಮ್ಮ ಆರೋಗ್ಯದ ಕಾಳಜಿ ವಹಿಸದೆ ಇರುವದರಿಂದ ವಿವಿಧ ಆರೋಗ್ಯ ಸಮಸ್ಯೆಗಳಲ್ಲಿ ಮೂತ್ರಪಿಂಡವು ದೊಡ್ಡ ಸಮಸ್ಯೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡಯಾಲಿಸಿಸ್‌ಗೆ ಸುಮಾರು 2 ರಿಂದ 3 ಸಾವಿರ ರೂ. ವೆಚ್ಚ ಭರಿಸಬೇಕಾಗುತ್ತದೆ. ಈ ನಿಟ್ಟನಲ್ಲಿ ರೋಗಿಗಳ ವೆಚ್ಚ ಮನಗಂಡ ಸರ್ಕಾರವು ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಡಯಾಲಿಸಿಸ್ ಸೇವೆ ನೀಡಲು ಆರಂಭಿಸಲಾಯಿತು ಎಂದು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಡಯಾಲಿಸಿಸ್ ಸೇವೆ ಲಭ್ಯವಿದೆ. ಗುಳೇದಗುಡ್ಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜೂ. 29ರಿಂದ ಉಚಿತ ಡಯಾಲಿಸಿಸ್ ಕಾರ್ಯ ನಿರ್ವಹಿಸಲಿದೆ.
Advertisement
ತಜ್ಞ ವೈದ್ಯರ ನಿರ್ದೇಶನದ ಮೇರೆಗೆ ವಾರಕ್ಕೆ ಎರಡು ಬಾರಿ ಉಚಿತ ಡಯಾಲಿಸಿಸ್ ಸೇವೆ ಪಡೆಯುವವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 6 ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಈ ಘಟಕಗಳಲ್ಲಿ ರೋಗಿಗಳಿಗೆ ಕೆಲ ಜೀವ ರಕ್ಷಕ ಔಷಧ ಸಹ ಉಚಿತವಾಗಿ ನೀಡಲಾಗುತ್ತದೆ. ಕಳೆದ 2018-19 ನೇ ಸಾಲಿನಲ್ಲಿ ಒಟ್ಟು 4,132 ಬಾರಿ ಡಯಾಲಿಸಿಸ್ ಸೇವೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಗುಳೇದಗುಡ್ಡ: ಡಯಾಲಿಸಿಸ್ ಘಟಕ ಇಂದು ಉದ್ಘಾಟನೆ
ಬಾಗಲಕೋಟೆ: ಗುಳೇದಗುಡ್ಡದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜೂ. 29ರಂದು ಬೆಳಗ್ಗೆ 10ಕ್ಕೆ ನೂತನ ಡಯಾಲಿಸಿಸ್ ಘಟಕದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೇರಿದಂತೆ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಗಳು ಪಾಲ್ಗೊಳ್ಳುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್. ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.