ಧಾರವಾಡ: ಅವಳಿನಗರ ಸೇರಿದಂತೆ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳ, ರಸ್ತೆ ಒತ್ತುವರಿ ಮಾಡಿ ನಿರ್ಮಿಸಿಕೊಂಡಿರುವ ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನೋಟಿಸ್ ಜಾರಿ ಮಾಡಲಾಗುವುದು. ಆ ಬಳಿಕ ಹತ್ತು ದಿನಗಳೊಳಗೆ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಸಾರ್ವಜನಿಕ ಆಸ್ತಿಗಳ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಅಧಿಕಾರಿಗಳ ಸಭೆ ಕೈಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲಾಡಳಿತ, ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು. ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಬಿಆರ್‌ಟಿಎಸ್ ರಸ್ತೆಗಳು ಹಾಗೂ ಮಹಾನಗರ ಪಾಲಿಕೆ ಆಸ್ತಿಗಳ ಒತ್ತುವರಿ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಕಾಲಮಿತಿಯಲ್ಲಿ ಒತ್ತುವರಿದಾರರಿಗೆ ತೆರವುಗೊಳಿಸಲು ಸೂಚನೆ ನೀಡಲಾಗುವುದು. ಅವರು ತೆರವುಗೊಳ್ಳದಿದ್ದರೆ ಪೊಲೀಸ್ ರಕ್ಷಣೆಯೊಂದಿಗೆ ತೆಗೆದು ಹಾಕಲಾಗುವುದು ಎಂದರು.
ಸರ್ಕಾರಕ್ಕೆ ಸೇರಿರುವ ಸ್ಥಳ, ನಿವೇಶನ, ರಸ್ತೆ ಅತಿಕ್ರಮಣಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ವಾಹನ ನಿಲುಗಡೆ ಸ್ಥಳಗಳನ್ನು ಹಾಗೂ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರಿಗೆ ಮೀಸಲಿಡುವುದು ಅಗತ್ಯವಾಗಿದೆ. ಮೊದಲ ಆದ್ಯತೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಸ್ಥಳಗಳನ್ನು ಸಾರ್ವಜನಿಕರಿಗೆ ಒದಗಿಸಲು ಒತ್ತು ನೀಡಲಾಗುವುದು. ಸಾರ್ವಜನಿಕರು ಜಿಲ್ಲೆಯ ಮತ್ತು ಅವಳಿನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮಾತನಾಡಿ, ಸಾರ್ವಜನಿಕ ಸಾರಿಗೆ ಸುಗಮ ಸಂಚಾರಕ್ಕೆ ವ್ಯತ್ಯಯವಾಗಲು ಕೆಲವೆಡೆ ಬಸ್ ನಿಲ್ದಾಣಗಳು, ವಾಹನ ನಿಲುಗಡೆ ಸ್ಥಳಗಳು ಅತಿಕ್ರಮಣವಾಗಿರುವುದನ್ನು ಗುರುತಿಸಲಾಗಿದೆ. ಅವುಗಳನ್ನು ಕೂಡಾ ತೆರವುಗೊಳಿಸಲಾಗುವುದು ಎಂದು ಹೇಳಿದರು. ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಅಪರ ಜಿಲ್ಲಾ ಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹ್ಮದ ಜುಬೇರ, ಡಿಸಿಪಿ ಡಾ| ಶಿವಕುಮಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತ ವಿರೂಪಾಕ್ಷಪ್ಪ
ಯಮಕನಮರಡಿ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಮಠದ, ಕೆಐಎಡಿಬಿ ಅಭಿವೃದ್ಧಿ ಅ ಧಿಕಾರಿ ಮನೋಹರ ವಡ್ಡರ, ಬಿಆರ್‌ಟಿಎಸ್ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಇನ್ನಿತರರಿದ್ದರು.