Advertisement

ರೈತ ಸಂಘದ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದನೆ

02:47 PM Jun 06, 2022 | Team Udayavani |

ಕೊಪ್ಪಳ: ಕರ್ನಾಟಕ ರೈತ ಸಂಘ ಹಾಗೂ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಮೂರು ದಿನಗಳ ಹೋರಾಟಕ್ಕೆ ಕೈಗಾರಿಕೆ ಇಲಾಖೆ, ಜಿಲ್ಲಾಡಳಿತ ಸ್ಪಂದಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಕ್ಕೆ ರೈತ ಸಂಘವು ಸಂತಸ ವ್ಯಕ್ತಪಡಿಸಿ, ಹೋರಾಟವನ್ನು ತಾತ್ಕಾಲಿಕ ಹಿಂಪಡೆದಿದೆ.

Advertisement

ಎಂಎಸ್‌ಪಿಎಲ್‌ ಕಂಪನಿಯು ಯೂನಿಟ್‌ನ್ನು ವಿಸ್ತರಣೆ ವಿರೋಧಿಸಿ, ಹೆಚ್ಚುವರಿ ರೈತರ ಭೂಮಿ ರೈತರಿಗೆ ವಾಪಾಸ್‌ ಕೊಡುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗಿತ್ತು. ಜಿಲ್ಲಾಡಳಿತವು ಇದಕ್ಕೆ ಸ್ಪಂದಿಸಿದ್ದು, ಕಂಪನಿ ಪ್ರತಿನಿಧಿಗಳ ಜೊತೆ ಸಭೆ ನಡೆಸಿ, ರಾಜ್ಯ ಕೈಗಾರಿಕೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೆಲವೊಂದು ಅಂಶಗಳನ್ನು ಆ ಪತ್ರದಲ್ಲಿ ವಿವರಿಸಿದ್ದಾರೆ.

ಜಿಲ್ಲಾಧಿಕಾರಿ ಅವರು ಬರೆದ ಪತ್ರದಲ್ಲಿ ಕೈಗಾರಿಕೆಗಾಗಿ ಖರೀದಿಸಿದ ಭೂಮಿಯನ್ನು ರೈತರಿಗೆ ವಾಪಸ್‌ ಕೊಡಲು ಕೋರಿದ್ದಾರೆ. ಕಂಪನಿಯು ಕೈಗಾರಿಕೆ ವಿಸ್ತರಣೆ ಮಾಡುವ ತೀರ್ಮಾನ ಕೈ ಬಿಟ್ಟಿರುವ ಕುರಿತು ಸಭೆಯಲ್ಲಿ ತಿಳಿಸಿದ್ದಾರೆ. ಖರೀದಿ ವ್ಯವಹಾರದಲ್ಲಿ ನಡೆದ ವಂಚನೆ ಕುರಿತು ನ್ಯಾಯಾಂಗ ತನಿಖೆಗೊಪ್ಪಿಸಲು ತಿಳಿಸಿದ್ದಾರೆ. ಕೆಐಎಡಿಬಿ ಮೂಲಕ ಎಕ್ಸಾಂ ಡಿಯರ್‌ ಕಂಪೆನಿಗೆ 350 ಎಕರೆ ಭೂಮಿ ಕಳೆದುಕೊಂಡ 71 ಕುಟುಂಬಗಳ ಪೈಕಿ 41 ಕುಟುಂಬಗಳಿಗೆ ಈವರೆಗೂ ಉದ್ಯೋಗ ದೊರೆತಿಲ್ಲ. ಈ 41 ಕುಟುಂಬಗಳಿಗೆ ತಕ್ಷಣ ಕೆಲಸ ಕೊಡಬೇಕು ಮತ್ತು ಅವರು ಅರ್ಜಿ ಸಲ್ಲಿಸಿದ ದಿನಗಳಿಂದ ವೇತನ ಲೆಕ್ಕ ಹಾಕಿ ಕೊಡಬೇಕು. ಕೆಲವರಿಗೆ 4 ವರ್ಷ ಇನ್ನು ಕೆಲವರಿಗೆ 6, 8 ವರ್ಷದ ವೇತನ ಕೊಡಲು ಕಂಪನಿಗೆ ಸೂಚನೆ ಕೊಟ್ಟಿದ್ದು, ಸಂತಸ ತರಿಸಿದೆ ಎಂದು ಅವರು ತಿಳಿಸಿದ್ದಾರೆ.

ಕುಣೆಕೇರಿ, ಲಾಚನಕೇರಿ, ಚಿಕ್ಕಬಗನಾಳ, ಕುಣಿಕೇರಿ ತಾಂಡಾದ ರೈತರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು. ಹೋರಾಟಕ್ಕೆ ಸಿಕ್ಕ ಜಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್‌. ಪೂಜಾರ, ರೈತ ಸಂಘದ ಶರಣಪ್ಪ ದೊಡ್ಡಮನಿ, ಖಾದಲ ಹುಸೇನ್‌ ಕಾರಟಗಿ, ಅಲ್ಲಮಪ್ರಭು ಬೆಟ್ಟದೂರು, ಬಿ.ಎನ್‌. ಯರದಿಹಾಳ, ಬಸವರಾಜ ಶೀಲವಂತರ, ಈಶಪ್ಪ ಕುಣಿಕೇರಿ, ಬಸವರಾಜ ಕುಂಬಾರ, ಮಂಜುನಾಥ ಗಡಗಿ, ಮಂಜುನಾಥ ಕುಂಬಾರ, ಬಸವರಾಜ ನರೆಗಲ್‌, ಲಿಂಗಯ್ಯ ಶಶಿಮಠ, ಪಂಪಯ್ಯ ಹಿರೇಮಠ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next