ಬಾಗಲಕೋಟೆ: ಜಿಲ್ಲೆಯ ಲೋಕಸಭಾ ಚುನಾವಣೆಗೆ ಕಳೆದ ಏಪ್ರಿಲ್ 23ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23ರಂದು ನಡೆಯಲಿದೆ. ತೋಟಗಾರಿಕೆ ವಿವಿಯಲ್ಲಿ ಸ್ಥಾಪಿಸಲಾದ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ತೋವಿವಿಯಲ್ಲಿ ಮತ ಎಣಿಕೆ ಕೊಠಡಿ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿಗಳು, ನೆಲಮಹಡಿಯಲ್ಲಿ ಮುಧೋಳ, ಬೀಳಗಿ, ಬಾದಾಮಿ ಹಾಗೂ ನರಗುಂದ ಮತಕ್ಷೇತ್ರಗಳ ಕೊಠಡಿಗಳಿದ್ದರೆ, ಮೊದಲನೇ ಮಹಡಿಯಲ್ಲಿ ತೇರದಾಳ, ಜಮಖಂಡಿ, ಬಾಗಲಕೋಟೆ ಹಾಗೂ ಹುನಗುಂದ ಮತಕ್ಷೇತ್ರದ ಎಣಿಕೆ ಕೊಠಡಿಗಳಿವೆ. ಈ ಎಣಿಕೆ ಕಾರ್ಯಕ್ಕೆ ಮತಕ್ಷೇತ್ರವಾರು ಅಳವಡಿಸಲಾದ 14 ಟೇಬಲ್ಗಳಲ್ಲಿ ಪ್ರತಿ ಟೇಬಲ್ಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬ ಸಹಾಯಕ ಹಾಗೂ ಒಬ್ಬ ಮೈಕ್ರೋ ವೀಕ್ಷಕ ಸೇರಿದಂತೆ 3 ಸಿಬ್ಬಂದಿ ನೇಮಕ ಮಾಡಲಾಗಿದೆ. ಅಂಚೆ ಮತಪತ್ರಗಳ ಟೇಬಲ್ಗೆ ಒಬ್ಬ ಸಹಾಯಕ ಚುನಾವಣಾಧಿಕಾರಿ, ಒಬ್ಬ ಎಣಿಕೆ ಮೇಲ್ವಿಚಾರಕ, ಇಬ್ಬರು ಎಣಿಕೆ ಸಹಾಯಕರು ಹಾಗೂ ಒಬ್ಬ ಮೈಕ್ರೋ ವೀಕ್ಷಕ ಸೇರಿದಂತೆ ಒಟ್ಟು 5 ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದರು.
ಮತ ಎಣಿಕೆ ಕಾರ್ಯ ದಿನ ಚುನಾವಣಾ ಅಭ್ಯರ್ಥಿಗಳು, ಏಜೆಂಟರು ಬೆಳಗ್ಗೆ 6 ಗಂಟೆಯೊಳಗೆ ಎಣಿಕೆ ಕೇಂದ್ರಕ್ಕೆ ಬರಬೇಕು. 7.30ಕ್ಕೆ ಸ್ಟಾಂಗ್ ರೂಮ್ ತೆರೆಯಲಾಗುತ್ತಿದ್ದು, 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. 8.30ಕ್ಕೆ ಮತಯಂತ್ರಗಳ ಎಣಿಕೆ ಕಾರ್ಯ ಆರಂಭವಾಗುವುದು. ಚುನಾವಣಾ ಆಯೋಗದ ನಿರ್ದೇಶನದಂತೆ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ಮುಗಿದು ಎರಡು ಸುತ್ತಿನ ಮತಯಂತ್ರಗಳ ಎಣಿಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಆಯೋಗ ಇತ್ತೀಚಿನ ನಿರ್ದೇಶನದಂತೆ ಅಂಚೆ ಮತಪತ್ರಗಳ ಎಣಿಕೆ ಮುಗಿಯುವವರೆಗೆ ಮತಯಂತ್ರಗಳ ಎಣಿಕೆಯನ್ನು ಸ್ಥಗಿತಗೊಳಿಸದೇ ಪೂರ್ಣಗೊಳಿಸಲಾಗುತ್ತದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರ 5 ವಿವಿಪ್ಯಾಟ್‌ಗಳ ಮತಎಣಿಕೆ:
Advertisement
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಬಾರಿಗಿಂತ ಈ ಬಾರಿ ಮತ ಎಣಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಫಲಿತಾಂಶ ಪ್ರತಿ ಬಾರಿಗಿಂತ 3ರಿಂದ 4 ಗಂಟೆಯಾಗಲಿದೆ ಎಂದರು. ಜಿಲ್ಲೆಯ ಲೋಕಸಭಾ ಮತಕ್ಷೇತ್ರಕ್ಕೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಪ್ರತಿ ಮತಕ್ಷೇತ್ರಕ್ಕೆ ತಲಾ ಒಂದು ಕೊಠಡಿ ನಿಯೋಜಿಸಲಾಗಿದ್ದು, 14 ಟೇಬಲ್ ಅಳಡಿಸಲಾಗಿದೆ ಎಂದು ತಿಳಿಸಿದರು.
Related Articles
Advertisement
ಮತಯಂತ್ರಗಳ ಮತ ಎಣಿಕೆ ಮುಕ್ತಾಯದ ನಂತರ ತೆಗೆದುಕೊಳ್ಳಲಾಗುತ್ತಿದ್ದು, ಒಂದು ವಿವಿಪ್ಯಾಟ್ ಮತ ಎಣಿಕೆ ನಂತರ ಎರಡನೆಯ ಮತ ಎಣಿಕೆ ಮಾಡಲಾಗುವುದು. ಎಣಿಕೆಗೆ ಆಗಮಿಸುವ ಅಭ್ಯರ್ಥಿಗಳು, ಚುನಾವಣಾ ಏಜೆಂಟ್ರಿಗೆ ಎಣಿಕೆ ಕೆಂದ್ರದ ಹೊರಗಡೆ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ವೆಚ್ಚವನ್ನು ಭರಣ ಮಾಡಿ ಉಪಹಾರ ಸೇವಿಸಬೇಕು. ಮೊಬೈಲ್ ಫೋನ್, ಗುಟಕಾ, ನಿಷೇಧಿತ ವಸ್ತುಗಳಾದ ಚಾಕು, ಚೂರಿ ಮುಂತಾದ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೇ ರಾಜಕೀಯ ಮುಖಂಡರು, ಶಾಸಕರು, ಸಚಿವರಿಗೂ ಕೂಡಾ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಮತ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗ ಮೂವರು ವೀಕ್ಷಕರನ್ನು ನೇಮಿಸಲಾಗಿದ್ದು, ಮುಧೋಳ, ತೇರದಾಳ, ಜಮಖಂಡಿ ಮತಕ್ಷೇತ್ರಗಳಿಗೆ ನರಸಿಂಹಗಾರಿ ಟಿ.ಎಲ್. ರೆಡ್ಡಿ, ಬೀಳಗಿ, ಬಾದಾಮಿ, ಬಾಗಲಕೋಟೆ ಹಾಗೂ ಹುನಗುಂದ ಕ್ಷೇತ್ರಗಳಿಗೆ ಬಲಿರಾಮ ಜಿ. ಪವಾರ ಹಾಗೂ ನರಗುಂದ ಮತಕ್ಷೇತ್ರಕ್ಕೆ ಎ.ಅರುಣಕುಮಾರ ಅವರನ್ನು ನೇಮಿಸಿದೆ ಎಂದು ತಿಳಿಸದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ಮತ ಎಣಿಕೆ ಕೇಂದ್ರ ಸುತ್ತಲೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 144 ಕಲಂ ನಿಷೇಧಾಜ್ಞೆ ಜಾರಿಗೆ ಮಾಡಲಾಗಿದ್ದು, ಈ ಆದೇಶ ಮೇ 23ರ ಬೆಳಗ್ಗೆ 6 ಗಂಟೆಯಿಂದ ಮೇ 25ರ ಬೆಳಗ್ಗೆೆ 6 ಗಂಟೆವರೆಗೆ 5ಕ್ಕಿಂತ ಹೆಚ್ಚು ಜನ ಸೇರುವುದಾಗಲಿ, ಮೆರವಣಿಗೆ, ವಿಜಯೋತ್ಸವ, ಸಾರ್ವಜನಿಕ ಸಭೆ, ಪಟಾಕಿ ಹಚ್ಚುವದನ್ನು ಹಾಗೂ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. 22ರ ಸಂಜೆ 6ರಿಂದ 24ರ ಸಂಜೆ 6 ಗಂಟೆವರೆಗೆ ಮದ್ಯ ಮಾರಾಟ ಹಾಗೂ ಸಂಗ್ರಹಣೆಯನ್ನು ನಿಷೇಧಿಸಲಾಗಿದೆ.
ಟೇಬಲ್ ಹಾಗೂ ಸುತ್ತುಗಳ ವಿವರ:
ಮುಧೋಳ ಮತಕ್ಷೇತ್ರಕ್ಕೆ 14 ಟೇಬಲ್ ಅಳವಡಿಸಲಾಗಿದ್ದು, 212 ಮತಗಟ್ಟೆಗಳ ಮತಗಳನ್ನು 16 ಸುತ್ತುಗಳ ಎಣಿಕೆ ನಡೆಯಲಿದೆ. ತೇರದಾಳ ಕ್ಷೇತಕ್ಕೆ 14 ಟೇಬಲ್, 235 ಮತಗಟ್ಟೆಗಳ ಮತಗಳನ್ನು 17 ಸುತ್ತಿನಲ್ಲಿ, ಜಮಖಂಡಿ ಕ್ಷೇತ್ರಕೆ 14 ಟೇಬಲ್, 232 ಮತಗಟ್ಟೆ, 17 ಸುತ್ತು, ಬೀಳಗಿ ಕ್ಷೇತ್ರಕ್ಕೆ 14 ಟೇಬಲ್, 263 ಮತಗಟ್ಟೆ, 19 ಸುತ್ತು, ಬಾದಾಮಿ ಕ್ಷೇತ್ರಕ್ಕೆ 14 ಟೇಬಲ್ 260 ಮತಗಟ್ಟೆ, 19 ಸುತ್ತು, ಬಾಗಲಕೋಟೆ ಕ್ಷೇತ್ರಕ್ಕೆ 14 ಟೇಬಲ್, 263 ಮತಗಟ್ಟೆ, 19 ಸುತ್ತು, ಹುನಗುಂದ ಕ್ಷೇತ್ರಕ್ಕೆ 14 ಟೇಬಲ್, 254 ಮತಗಟ್ಟೆ, 19 ಸುತ್ತು, ನರಗುಂದ ಕ್ಷೇತ್ರಕ್ಕೆ 14 ಟೇಬಲ್, 219 ಮತಗಟ್ಟೆ, 16 ಸುತ್ತುಗಳ ಎಣಿಕೆ ನಡೆಯಲಿದೆ. ಅಂಚೆ ಮತ ಪತ್ರಗಳ ಎಣಿಕೆಯನ್ನು ಎರಡು ಸುತ್ತುಗಳಲ್ಲಿ ಎಣಿಕೆ ಮಾಡಲಾಗುತ್ತಿದೆ.