Advertisement
ಚರಂಡಿ ದುರಸ್ತಿ, ಅಪಾಯಕಾರಿ ಮರಗಳ ತೆರವಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಆ ಕಾರ್ಯಗಳೂ ನಡೆಯುತ್ತಿವೆ.
ಕರಾವಳಿಗೆ ಈ ವಾರದಲ್ಲಿ ಮುಂಗಾರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕರಾವಳಿಯಲ್ಲಿ ಉತ್ತಮ ಮಳೆ ಸುರಿಯಲಿದೆ ಎಂದು ಈಗಾಗಲೇ ಹವಾಮಾನ ಸಂಸ್ಥೆಗಳು ತಿಳಿಸಿವೆ. ದಕ್ಷಿಣ ಭಾರತದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿರಲಿದ್ದು, ಶೇ. 93ರಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರು ಉತ್ತಮವಾಗಿತ್ತು. ಜಿಲ್ಲೆಯ ವಾಡಿಕೆ ಮಳೆ 4,017 ಮಿ.ಮೀ.ಯಾಗಿದ್ದು, ಕಳೆದ ವರ್ಷ 4,095.6ಮಿ.ಮೀ. ಮಳೆ ಸುರಿದಿತ್ತು. ಜಿಲ್ಲೆಯಲ್ಲಿ 2016ರಲ್ಲಿ 3,484.6ಮಿ.ಮೀ., 2017ರಲ್ಲಿ 3,734.1 ಮಿ.ಮೀ. ಮಳೆಯಾಗಿತ್ತು. ಆದರೆ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸುರಿದ ಪ್ರಮಾಣ ಅತಿ ಕನಿಷ್ಠವಾಗಿದೆ. ಮಾರ್ಚ್‌ನಿಂದ ಮೇ ತನಕ ಉಡುಪಿಯಲ್ಲಿ ಸುರಿದ ಮಳೆಯ ಪ್ರಮಾಣ 3 ಮಿ.ಮೀ.ಮಾತ್ರ.
Related Articles
ಮಾರ್ಚ್‌ನಿಂದ ಮೇ ವರೆಗೆ ಜಿಲ್ಲೆಯಲ್ಲಿ ವಾಡಿಕೆ ಯಂತೆ 20 ಮಿ.ಮೀ. ಆಗಬೇಕಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಜೂನ್‌ನಿಂದ ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಸುಮಾರು 4,000 ಮಿ.ಮೀ.ಮಳೆಯಾಗುವ ನಿರೀಕ್ಷೆ ಹೊಂದಲಾಗಿದೆ. ಸೆಪ್ಟಂಬರ್‌ನಿಂದ ಡಿಸೆಂಬರ್ ತಿಂಗಳವರೆಗೆ 300 ಮಿ.ಮೀ. ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ.
Advertisement
ಕಳೆದ ಬಾರಿ ಕಾರ್ಕಳದಲ್ಲಿ ಹೆಚ್ಚು ಮಳೆ2018ರಲ್ಲಿ ಕಾರ್ಕಳ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿತ್ತು. 4,828 ಮಿ.ಮೀ. ವಾಡಿಕೆ ಮಳೆ ಯಾಗಬೇಕಿತ್ತು. ಆದರೆ ಸುರಿದದ್ದು ಬರೊಬ್ಬರಿ 4,558.9 ಮಿ.ಮೀ. ಮಳೆ. ಉಡುಪಿಯಲ್ಲಿ 3,931.9 ಹಾಗೂ ಕುಂದಾಪುರ ತಾಲೂಕಿನಲ್ಲಿ 3,888.6 ಮಿ.ಮೀ.ಮಳೆ ಸುರಿದಿತ್ತು. ಸಂಪೂರ್ಣ ಸನ್ನದ್ಧ
ಮಳೆಗಾಲ ಎದುರಿಸಲು ವಿಪತ್ತು ನಿರ್ವಹಣೆ ತಂಡ ಸಂಪೂರ್ಣ ಸನ್ನದ್ಧವಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಚರಂಡಿಗಳ ದುರಸ್ತಿ ಹಾಗೂ ಅಪಾಯಕಾರಿ ಮರಗಳ ತೆರವಿಗೆ ಆದೇಶ ನೀಡಿದ್ದಾರೆ.
-ರವಿ, ವಿಪತ್ತು ನಿರ್ವಹಣೆ ತಜ್ಞರು ಮೆಸ್ಕಾಂನಿಂದ 105 ಗ್ಯಾಂಗ್‌ಮೆನ್‌ಗಳ ನಿಯೋಜನೆ
ಮಳೆಗಾಲದಲ್ಲಿ ಉಂಟಾಗಬಹುದಾದ ವಿದ್ಯುತ್ ಸಂಬಂಧಿ ಅಪಾಯ, ಅವಘಡ, ಅಡಚಣೆಗಳನ್ನು ಸಮರ್ಥವಾಗಿ ನಿಭಾಯಿಸುವ ಪ್ರಯತ್ನವಾಗಿ ಮೆಸ್ಕಾಂ ಉಡುಪಿ ವಿಭಾಗವು 105 ಮಂದಿ ಗ್ಯಾಂಗ್‌ಮೆನ್‌ಗಳನ್ನು ನಿಯೋಜಿಸಿದೆ. ಕಳೆದ ವರ್ಷ ಉಡುಪಿ ಮತ್ತು ಕಾರ್ಕಳ ತಾಲೂಕುಗಳನ್ನೊಳಗೊಂಡ ಉಡುಪಿ ವಿಭಾಗದಲ್ಲಿ 2,300 ಕಂಬಗಳು ಹಾನಿಯಾಗಿದ್ದವು. 6.70 ಕೋ.ರೂ.ಗಳಷ್ಟು ನಷ್ಟ ಉಂಟಾಗಿತ್ತು. ಅಂಬಲಪಾಡಿ, ಕಡೆಕಾರು, ಕಿದಿಯೂರು ಮೊದಲಾದೆಡೆ ಮುಂಗಾರಿನ ಆರಂಭದಲ್ಲೇ ಬಲವಾದ ಗಾಳಿಗೆ ಮರಗಳು ವಿದ್ಯುತ್ ಕಂಬ, ತಂತಿಗೆ ಉರುಳಿ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ಧರಾಶಾಯಿಯಾಗಿದ್ದವು. ಅದನ್ನು ಮರುಸ್ಥಾಪಿಸಲು ವಾರಗಳ ಕಾಲ ಬೇಕಾಗಿತ್ತು. ಗೆಲ್ಲುಗಳ ತೆರವು
ವಿದ್ಯುತ್ ತಂತಿ ಸಮೀಪವಿರುವ ಮರದ ಗೆಲ್ಲುಗಳನ್ನು ಕಡಿಯುವ ಕಾರ್ಯಾಚರಣೆಯನ್ನು ಉಡುಪಿ ಭಾಗದಲ್ಲಿ ಎಪ್ರಿಲ್‌ನಲ್ಲಿಯೇ ಆರಂಭಿಸಲಾಗಿದ್ದು ಅದು ಮುಂದು ವರೆದಿದೆ. ಗ್ಯಾಂಗ್‌ಮೆನ್‌ಗಳನ್ನು ಏಜೆನ್ಸಿ ಮೂಲಕ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದ್ದು ಅವರು ಮಳೆಗಾಲದ 3 ತಿಂಗಳು ಮೆಸ್ಕಾಂ ಅಧಿಕಾರಿ, ಸಿಬಂದಿ ಜತೆ ಕಾರ್ಯನಿರ್ವಹಿಸಲಿದ್ದಾರೆ. ಮಳೆಗಾಲ ಮತ್ತೆ ಮುಂದು ವರಿದರೆ ಅವರ ಕೆಲಸವೂ ಮುಂದುವರಿಯಲಿದೆ. ವಿದ್ಯುತ್ ಜಾಲ ಮೇಲ್ದರ್ಜೆಗೆ
ಉಡುಪಿ ನಗರವೂ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಜಾಲವನ್ನು ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ. ಹಳೆಯ, ಸವೆದಿರುವ ತಂತಿಗಳನ್ನು ತೆಗೆದು ಹೊಸ ತಂತಿಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ವೋಲ್ಟೆàಜ್ ಉತ್ತಮವಾಗುವ ಜತೆಗೆ ವಿದ್ಯುತ್ ಅವಘಡದ ಅಪಾಯವೂ ಕಡಿಮೆಯಾಗಲಿದೆ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು. ಟೋಲ್‌ಫ್ರೀ ನಂಬರ್
ಸಮರ್ಪಕ ಸೇವೆ, ಸಾರ್ವಜನಿಕರು ಮತ್ತು ಸಿಬಂದಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರು ಮಳೆಯಿಂದಾಗುವ ಅಪಾಯ, ಹಾನಿ ಸೇರಿದಂತೆ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಸಂಬಂಧಿಸಿ ಟೋಲ್‌ಫ್ರೀ ಸಂಖ್ಯೆ 1912ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. – ಪುನೀತ್ ಸಾಲ್ಯಾನ್