Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳ ಹರಿವು ಬರುತ್ತಿರುವುದರಿಂದ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನದಿಗೆ ಹೆಚ್ಚಿನ ನೀರು ಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದ್ದು, ಕಳೆದ ವರ್ಷ ಇಂತದ್ದೇ ಪರಿಸ್ಥಿತಿ ಎದುರಾದಾಗ ಎಲ್ಲೆಲ್ಲಿ ಸಮಸ್ಯೆ ಉಂಟಾಗಿತ್ತು ಎಂಬುದರ ಆಧಾರದ ಮೇಲೆ ಅಂತಹ ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ನದಿ ಪಾತ್ರದಲ್ಲಿನ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಸೂಚಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರಗಳಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದಾರೆ ಎಂದು ತಿಳಿಸಿದರು.
Related Articles
Advertisement
ಕೊಡಗು ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿರು ವುದರಿಂದ ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿರುವುದರಿಂದ ಜಲಾಶಯದಿಂದ 55 ಸಾವಿರ ಕ್ಯೂಸೆಕ್‌ಗಳಷ್ಟು ನೀರು ಹೊರ ಬಿಡುತ್ತಿರು ವುದರಿಂದ ನದಿ ಪಾತ್ರದ ಪಿರಿಯಾಪಟ್ಟಣ, ಕೆ.ಆರ್. ನಗರ ತಾಲೂಕಿನ ಕೆಲ ಗ್ರಾಮಗಳಲ್ಲಿ ಸಮಸ್ಯೆ ಎದು ರಾಗಲಿದೆ. ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತ ವಾಗುವ ಕಾರಣ ಅಗತ್ಯವಿರುವ ಕಡೆಗಳಲ್ಲಿ ತುರ್ತಾಗಿ ಗಂಜಿಕೇಂದ್ರ ತೆರೆಯುವ ಜೊತೆಗೆ ಮಳೆಯಲ್ಲಿ ಸಿಲುಕವ ಜನರಿಗೆ ಬೆಡ್‌ಶೀಟ್, ಮಳೆ ಕೋಟ್, ಸೊಳ್ಳೆಬತ್ತಿ ವ್ಯವಸ್ಥೆ ಮಾಡುವ ಜೊತೆಗೆ ಆರೋಗ್ಯ ಸೇವೆ ಒದಗಿಸಲು ಸೂಚಿಸಲಾಗಿದೆ. ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದೇವಸ್ಥಾನದ ಅಂಚಿಗೆ ನೀರು ನುಗ್ಗದಂತೆ ಮರಳು ಮೂಟೆಯ ತಡೆಗೋಡೆ ನಿರ್ಮಿಸುವುದು, ನಂಜನಗೂಡು ಪಟ್ಟಣದ ಹಳೇ ಬೀದಿ, ತೋಪಿನ ಬೀದಿ, ಬೊಕ್ಕಹಳ್ಳಿ, ಎಚ್.ಡಿ.ಕೋಟೆ ತಾಲೂಕಿನ ತುಂಬಸೋಗೆ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನಾಲ್ಕು ಬೋಟ್ ಬಳಕೆ: ಕಬಿನಿ ಪ್ರವಾಹದಿಂದ ಮುಳುಗಡೆಯಾದರೆ ಪರಿಹಾರ ಕಾರ್ಯಕ್ಕಾಗಿ ನಾಲ್ಕು ಬೋಟ್‌ಗಳನ್ನು ಕಾದಿರಿಸಲಾಗಿದೆ. ಈಗಾಗಲೇ ಎಚ್.ಡಿ.ಕೋಟೆ ತಾಲೂಕಿನ ಬಾವಲಿಗೆ ಒಂದು, ನಂಜನಗೂಡಿಗೆ ಒಂದು ಬೋಟ್ ಕಳುಹಿಸಿದ್ದು, ಇನ್ನೆರಡು ಬೋಟ್‌ಗಳನ್ನು ತುರ್ತು ಸಂದರ್ಭದಲ್ಲಿ ಬಳಸಲು ಕಾದಿರಿಸಲಾಗಿದೆ. ಮಳೆ ಅನಾಹುತದ ಸಮ ಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲು ಪ್ರತಿ ತಾಲೂಕಿಗೂ 25ಲಕ್ಷ ಹಣ ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿ ನಿಧಿಯಲ್ಲಿ 12 ಕೋಟಿ ರೂ. ಹಣವಿದೆ. ಹೀಗಾಗಿ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ ಎಂದರು.
ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳಲು ಪ್ರವಾಹ ಪರಿಸ್ಥಿತಿ ತಗ್ಗಿದ ಬಳಿಕ ತಾಲೂಕುವಾರು ಸಮೀಕ್ಷೆ ಮಾಡಿಸಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಅಧಿಕಾರಿ ಗಳ ತಂಡ ರಚಿಸಲಾಗುತ್ತಿದೆ. ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಕಡಿತವಾದಲ್ಲಿ ಬದಲಿ ಮಾರ್ಗಕ್ಕೆ ಕ್ರಮವಹಿಸಿದ್ದು, ಮಾರ್ಗ ಬದಲಾವಣೆ ಬಗ್ಗೆ ಸ್ಪಾಟ್ಲೈಟ್ ,ಸೈನ್ ಬೋರ್ಡ್ ಹಾಕಲು ತಿಳಿಸಲಾಗಿದೆ. ಇದಲ್ಲದೆ ವಿದ್ಯುತ್ ತಂತಿ ಕಡಿದು ಬಿದ್ದರೆ ಯಾವುದೇ ಅನಾಹುತ ವಾಗದಂತೆ ತತಕ್ಷಣ ಫೀಡರ್‌ಲೇನ್ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿರುವ ನುರಿತ ಈಜು ಗಾರರ ಪಟ್ಟಿ ಮಾಡಿದ್ದು, ಯಾವುದೇ ಸಂದರ್ಭದಲ್ಲಿ ಎದುರಾಗುವ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿರು ವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರಿ: ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲೇ ಇರುವಂತೆ ಸೂಚಿಸಲಾಗಿದೆ. ರಜೆ ಇದ್ದರೂ ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಟ್ಟು ಹೋಗುವಂತಿಲ್ಲ. ಮೊಬೈಲ್ ಫೋನ್ ಕೂಡ ಸ್ವಿಚ್ಆಫ್ ಮಾಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.