Advertisement

ಸ್ವಚ್ಛ ಮೇವ “ಜಯ’ತೆಗೆ ಜಿಲ್ಲಾಡಳಿತ ಸಜ್ಜು

01:05 AM Jun 05, 2019 | Lakshmi GovindaRaj |

ಬೆಂಗಳೂರು: ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಹಲವು ಪ್ರದೇಶಗಳಲ್ಲಿ ನೀರಿನ ಅಭಾವ ಕಂಡು ಬಂದಿದ್ದು, ಆ ಹಿನ್ನೆಲೆಯಲ್ಲಿ “ಜಲಾಮೃತ, ಯೋಜನೆ ಯಶಸ್ವಿಗೆ ಪಣ ತೊಟ್ಟಿರುವ ಬೆಂಗಳೂರು ನಗರ ಜಿಲ್ಲಾಡಳಿತ 96 ಗ್ರಾಮ ಪಂಚಾಯ್ತಿಗಳಲ್ಲಿ 2 ಲಕ್ಷ ಸಸಿ ನೆಡಲು ಸಜ್ಜಾಗಿದೆ.

Advertisement

ಜತೆಗೆ “ಸ್ವಚ್ಛಮೇವ ಜಯತೆ’ ಆಂದೋಲನದ ಭಾಗವಾಗಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ “ವಿಶೇಷ ಕೈ ತೊಳೆಯುವ ಅಭಿಯಾನ,’ ಶಿಕ್ಷಕರು ಮತ್ತು ಮಕ್ಕಳಿಗೆ “ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸುವುದು’, ಸೇರಿದಂತೆ ಹಲವು ಕಾರ್ಯಕ್ರಮ ರೂಪಿಸಿಲಾಗಿದೆ. ಇದರ ಯಶಸ್ವಿ ಜವಾಬ್ದಾರಿಯನ್ನು ಕ್ಲಸ್ಟರ್‌ ಹಂತದ ನೋಡಲ್‌ ಅಧಿಕಾರಿಗಳಿಗೆ ನೀಡಲಾಗಿದೆ.

ಜೂನ್‌ 11ರಿಂದ ಜುಲೈ 10 ರ ವರೆಗೆ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸ್ವಚ್ಛಮೇವ ಜಯತೆ ನಡೆಯಲಿದ್ದು, ರಾಜ್ಯ ಸರ್ಕಾರದ ಜಲಾಮೃತ ಯೋಜನೆಯಡಿ ಜೂನ್‌ 11ರಂದು ನಗರ ಜಿಲ್ಲಾಡಳಿತ ವ್ಯಾಪ್ತಿಯ 96 ಗ್ರಾಮ ಪಂಚಾಯ್ತಿಯಲ್ಲಿ ಏಕ ಕಾಲದಲ್ಲಿ 48 ಸಾವಿರ ಸಸಿ ನೆಡಲಾಗುವುದು.

ಗಿಡ ನೆಡುವ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳು ಸಹಕಾರ ನೀಡಿದ್ದು ಈ ಕಾರ್ಯಕ್ಕೆ ಬೇಕಾಗುವ ಸಸಿಗಳನ್ನು ಅರಣ್ಯ ಇಲಾಖೆಯಿಂದ ಪಡೆಯಲಾಗುತ್ತದೆ. ಹೊಂಗೆ,ನೇರಳೆ, ಬೇವು ಸೇರಿದಂತೆ ಹೆಚ್ಚು ನೆರಳು ನೀಡುವ ಸಸಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ನಗರ ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.

ವಿಶೇಷ ಕೈ ತೊಳೆಯುವ ಅಭಿಯಾನ: “ಸ್ವಚ್ಛ ಮೇವ ಜಯತೆ’,ಯೋಜನೆಯಡಿ ಗ್ರಾಮಾಂತರ ಪ್ರದೇಶದ ಶಾಲಾ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ತಿಳುವಳಿಕೆ ನೀಡುವ ಸಂಬಂಧ ವಿಶೇಷ ಕೈ ತೊಳೆಯುವ ಅಭಿಯಾನ ಹಮ್ಮಿ ಕೊಳ್ಳಲಾಗುವುದು.

Advertisement

ಗ್ರಾಮೀಣ ಪ್ರದೇಶದ ಅಂಗನವಾಡಿ ಮತ್ತು ಶಾಲೆಗಳಲ್ಲಿರುವ ಶೌಚಾಲಯದ ಬಳಕೆ ಬಗ್ಗೆ ತಿಳುವಳಿಕೆ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ನಗರ ಜಿಲ್ಲಾಡಳಿತದ ಸ್ವಚ್ಛ ಭಾರತ್‌ ಮಿಷನ್‌ ಯೋಜನಾ ಅಧಿಕಾರಿಗಳು ತಿಳಿಸಿದ್ದಾರೆ.

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು ಯೋಜನೆ ಯಶಸ್ವಿ ಸಂಬಂಧ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕ ಕಟ್ಟಡಗಳ ಮೇಲೆ ಗೋಡೆ ಬರಹ ಬರೆಯಲಾಗುವುದು.

ಅಲ್ಲದೆ ಸ್ವಚ್ಛ ಮೇವ ಜಯತೆ ಆಂದೋಲನದಡಿ ಘನತ್ಯಾಜ್ಯ ವಿಲೇವಾರಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 40 ಗ್ರಾಮ ಪಂಚಾಯ್ತಿ ಆಯ್ಕೆ ಮಾಡಲಾಗಿದ್ದು ರಾಜಾನುಕುಂಟೆ, ಬೆಟ್ಟಹಲಸೂರು ಮತ್ತು ಸೋಮನಹಳ್ಳಿ ಗ್ರಾಮ ಪಂಚಾಯ್ತಿಯನ್ನು “ಆದರ್ಶ’ ಗ್ರಾಮ ಪಂಚಾಯ್ತಿಯನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಕ್ಕೆ ಬಲಿದೆ ಸ್ವಚ್ಛ ತಾ ರಥ: “ಸ್ವಚ್ಛ ಮೇವ ಜಯತೆ’ ಕಾರ್ಯಕ್ರಮದಡಿ ನಗರ ಜಿಲ್ಲಾಡಳಿತ ಹಲವು ರೂಪರೇಷೆಗಳನ್ನು ಸಿದ್ಧಪಡಿಸಿದೆ. ಸುಮಾರು ಒಂದು ತಿಂಗಳ ಕಾಲ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಸ್ವಚ್ಛತಾ ರಥ ಸಂಚರಿಸಲಿದ್ದು ಗ್ರಾಮೀಣ ಭಾಗದ ಜನರಿಗೆ ಸ್ವಚ್ಛ ಮೇವ ಜಯತೆ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಶೌಚಾಲಯದ ಬಳಕೆ, ಘನ ತ್ಯಾಜ್ಯ ನಿರ್ವಣೆ, ಹಸಿಕಸ, ಒಣಕಸ ವಿಂಗಡಣೆ, ಮಕ್ಕಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಬೆಂಗಳೂರು ನಗರ ಜಿಲ್ಲಾಡಳಿತ “ಸ್ವಚ್ಛಮೇವ ಜಯತೆ’ ಮತ್ತು “ಜಲಾಮೃತ’ ಯೋಜನೆ ಯಶಸ್ವಿ ಸಂಬಂಧ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳ ಸಭೆ ನಡೆಸಲಾಗಿದೆ.
-ಎಂ.ಎಸ್‌.ಅರ್ಚನಾ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next