Advertisement

ಪ್ರತಿಭಟನೆಗೆ ಕ್ಯಾರೇ ಎನ್ನದ ಜಿಲ್ಲಾಡಳಿತ

10:42 AM Dec 31, 2019 | Team Udayavani |

ಧಾರವಾಡ: ಜಿಪಂ ವ್ಯಾಪ್ತಿಯ ನೆರೆ ಪರಿಹಾರ ಕಾಮಗಾರಿಗಳಲ್ಲಿ ಜಿಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಜಿಲ್ಲಾಡಳಿತ ಹಾಗೂ ಜಿಪಂ ಅಧಿಕಾರಿಗಳ ಕ್ರಮ ಖಂಡಿಸಿ ಜಿಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇತೃತ್ವದಲ್ಲಿ ಕೈಗೊಂಡಿರುವ ಅಹೋರಾತ್ರಿ ಧರಣಿ ಮುಂದುವರಿದಿದೆ.

Advertisement

ಡಿ. 23ರಿಂದ ಜಿಪಂ ಪ್ರವೇಶ ದ್ವಾರ ಬಳಿ ಅಹೋರಾತ್ರಿ ಧರಣಿ ಕೈಗೊಂಡಿದ್ದ ಸದಸ್ಯರು, ಸೋಮವಾರ ಜಿಪಂ ಆವರಣ ಸ್ವಚ್ಛಗೊಳಿಸುವುದು ಹಾಗೂ ಕ್ರೀಡೆ ಆಡುವ ಮೂಲಕ ಗಮನ ಸೆಳೆದರು. ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿದಂತೆ ಸದಸ್ಯರೆಲ್ಲರೂ ಬೆಳಗ್ಗೆ 9ರಿಂದ 11ಗಂಟೆವರೆಗೆ ಜಿಪಂ ಆವರಣ ಸ್ವತ್ಛಗೊಳಿಸಿ ಕೆಲ ಹೊತ್ತು ಕ್ರೀಡೆಗಳನ್ನು ಆಡಿ ನಂತರ ಅಲ್ಲಿಯೇ ಉಪಹಾರ ಸಿದ್ಧಪಡಿಸಿ ಸೇವಿಸುವ ಮೂಲಕ ಡಿಸಿ ಕ್ರಮ ಖಂಡಿಸಿದರು.

ಸೋಮವಾರ ಜಿಪಂ ಆವರಣ, ಮಂಗಳವಾರ ಜಿಲ್ಲಾಧಿಕಾರಿ ಆವರಣ, ವರ್ಷದ ಮೊದಲ ದಿನ ಜ. 1ರಂದು ಡಿಡಿಪಿಐ ಕಚೇರಿ, ಆರೋಗ್ಯ ಇಲಾಖೆ ಹೀಗೆ ಸರ್ಕಾರದ ಎಲ್ಲ ಕಚೇರಿಗಳ ಆವರಣ ಹಾಗೂ ಅಲ್ಲಿನ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯ ಮಾಡಲಿದ್ದೇವೆ. ಜೊತೆಗೆ ಜಿಪಂ ಸದಸ್ಯರು ಕೆಲವು ಕ್ರೀಡೆಗಳಲ್ಲೂ ತೊಡಗಿಸಿಕೊಳ್ಳಲಿದ್ದೇವೆ. ಕಳೆದ 10 ದಿನಗಳಿಂದಲೂ ಪ್ರತಿಭಟನೆ ಕುಳಿತರೂ ಉಸ್ತುವಾರಿ ಸಚಿವರು ಮಾತ್ರ ನಮ್ಮ ಬಳಿ ಬಂದಿಲ್ಲ. ತಮಗೆ ಏನೂ ಸಂಬಂಧವೇ ಇಲ್ಲ ಎಂದುಕೊಂಡಿರುವ ಶೆಟ್ಟರ್‌ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಮಾತನಾಡಿ, ಡಿಸಿ ಕಚೇರಿ, ಜಿಪಂ ಆವರಣದಲ್ಲಿ ಸ್ವತ್ಛತೆಯೇ ಇಲ್ಲವಾಗಿದೆ. ನಿರ್ವ ಹಣೆಗೆ ಸಾಕಷ್ಟು ಅನುದಾನ ಬಳಸಿಕೊಳ್ಳುತ್ತಿದ್ದರೂ ಸ್ವತ್ಛತೆ ಮಾತ್ರ ಕಾಣುತ್ತಿಲ್ಲ. ಬಂದ ಜನರಿಗೆ ಇಲ್ಲಿನ ಯಾವ ಕಚೇರಿಗಳಲ್ಲೂ ಶೌಚಾಲಯಗಳು ಸರಿಯಿಲ್ಲ. ನಮ್ಮ ಪ್ರತಿಭಟನೆ ಅಂಗವಾಗಿ ಸ್ವತ್ಛತಾ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಪ್ರತಿಭಟನೆಯೊಂದಿಗೆ ವ್ಯವಸ್ಥೆ ಸಹ ಸ್ವತ್ಛಗೊಳಿಸುವ ಕಾರ್ಯ ನಡೆಯಲಿದೆ ಎಂದರು.

ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ನೆರೆ ಪರಿಹಾರವಾಗಿ ಜಿಲ್ಲೆಗೆ 50 ಕೋಟಿ ಅನುದಾನ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆ ಕಳೆದುಕೊಂಡವರಿಗೆ, ರಸ್ತೆ-ಸೇತುವೆ ನಿರ್ಮಾಣ ಕಾರ್ಯ ನಡೆಯಬೇಕಿದೆ. ಜಿಲ್ಲಾಧಿಕಾರಿಗಳು ತಮ್ಮ ಗಮನಕ್ಕೆ ತರದೇ ಕಾಮಗಾರಿಗಳನ್ನು ಆಯಾ ಶಾಸಕರ ಮೂಲಕ ನೀಡಿದ್ದಾರೆ ಎಂದರು. ಉಮೇಶ ಹೆಬಸೂರ, ಕರೆಪ್ಪ ಮಾದರಿ, ಅಣ್ಮಪ್ಪ ದೇಸಾಯಿ, ರೇಣುಕಾ ಇಬ್ರಾಹಿಂಪುರ, ಚೆನ್ನಮ್ಮ ಪಾಟೀಲ, ಮಂಜಪ್ಪ ಹರಿಜನ, ಚನ್ನಬಸಪ್ಪ ಮಟ್ಟಿ, ರತ್ನಾ ಪಾಟೀಲ, ವಿದ್ಯಾ ಭಾವನವರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next