Advertisement

ಸ್ವಾತಂತ್ರೋತ್ಸವ ಅದ್ಧೂರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

01:08 PM Aug 06, 2018 | |

ಯಾದಗಿರಿ: ನೂತನ ತಾಲೂಕುಗಳಾದ ಗುರುಮಠಕಲ್‌, ವಡಗೇರಾ ಹಾಗೂ ಹುಣಸಗಿ ಸೇರಿದಂತೆ ಜಿಲ್ಲಾದ್ಯಂತ ಆಗಸ್ಟ್‌ 15ರಂದು 72ನೇ ಸ್ವಾತಂತ್ರೋತ್ಸವ ದಿನವನ್ನು ಅದ್ಧೂರಿಯಾಗಿ ಆಚರಿಸಬೇಕು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸ್ವಾತಂತ್ರೋತ್ಸವ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಆ.15ರಂದು ಬೆಳಗ್ಗೆ 7:00ರಿಂದ 8:00ರ ವರೆಗೆ ತಮ್ಮ ಕಚೇರಿಗಳಲ್ಲಿ ಮತ್ತು ಶಾಲಾ- ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ನಂತರ 8:30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂದು ಬೆಳಗ್ಗೆ 8:00ಕ್ಕೆ ಜಿಲ್ಲಾಡಳಿತ ಸಂಕೀರ್ಣಕ್ಕೆ ಆಗಮಿಸಿ ಧ್ವಜಾರೋಹಣ ನೆರವೇರಿಸಿದ ನಂತರ ಜಿಲ್ಲಾ ಕ್ರೀಡಾಂಗಣದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ಸೂಚಿಸಿದರು.

ನಾಡಗೀತೆ, ಭಕ್ತಿಗೀತೆ, ರಾಷ್ಟ್ರಗೀತೆ ಹಾಡಲು ನುರಿತ ವಿದ್ಯಾರ್ಥಿಗಳನ್ನು ಕರೆದುಕೊಂಡು ಜಿಲ್ಲಾ ಕ್ರೀಡಾಂಗಣಕ್ಕೆ ಬರಲು ತಿಳಿಸಲಾಯಿತು. ಅದೇ ರೀತಿಯಾಗಿ ಸಂಜೆ 4:00ಕ್ಕೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅವರಿಗೆ ಸೂಚಿಸಿದರು. 

ಅಂದು ಬೆಳಗ್ಗೆ 9:00ಕ್ಕೆ ಕ್ರೀಡಾಂಗಣದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುವರು. ನಂತರ ಶಾಲಾ- ಕಾಲೇಜು ಮಕ್ಕಳಿಂದ ಭಾವೈಕ್ಯತೆಯಿಂದ ಕೂಡಿರುವ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಈ ಬಾರಿಯಿಂದ ಆಕರ್ಷಕ ಕವಾಯತು ಪ್ರದರ್ಶಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲು ನಿರ್ಧರಿಸಲಾಯಿತು. ಗದಗ ಜಿಲ್ಲೆಯ ಕಲಾವಿದರಾದ ರಾಜಶೇಖರ ಅವರ ತಂಡದಿಂದ ಕಾರ್ಯಕ್ರಮ ಪ್ರದರ್ಶನಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು. 

Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆ ಗಮನಕ್ಕೆ ತಂದರು. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 3 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲು ಪಟ್ಟಿ ನೀಡುವಂತೆ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರು-ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರ ಪತ್ನಿ-ಪತಿ ಅವರನ್ನು ಗೌರವಿಸಲು ನಿರ್ಧರಿಸಲಾಯಿತು.

ಪೊಲೀಸ್‌ ಇಲಾಖೆಯಿಂದ-2, ಅರಣ್ಯ ಇಲಾಖೆ-1, ಅಬಕಾರಿ ಇಲಾಖೆ-1, ಅಗ್ನಿಶಾಮಕ ಇಲಾಖೆ-1, ಭಾರತ ಸೇವಾದಳ-2, ಗೃಹರಕ್ಷಕ ದಳ-1, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌-1, ಶಾಲಾ ತಂಡ-3, ಕಾಲೇಜು ತಂಡ-2, ಎನ್‌ಸಿಸಿ ಅಥವಾ ಎನ್‌ಎಸ್‌ಎಸ್‌ನಿಂದ 1 ತಂಡ ಸಾಮೂಹಿಕ ಕವಾಯಿತುನಲ್ಲಿ ಭಾಗವಹಿಸಲು ತೀರ್ಮಾನ ಕೈಗೊಳ್ಳಲಾಯಿತು.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ದಿನದಂದು ಕವಾಯತ್‌ನಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಮೂರು ದಿನಗಳ
ತರಬೇತಿ ಅವಧಿಯಲ್ಲಿ ಬೆಳಗ್ಗೆ ಹಾಗೂ ಸಂಜೆ ಬಾಳೆಹಣ್ಣು, ಹಾಲು ಮತ್ತು ಕುಡಿಯುವ ನೀರು ಹಾಗೂ ಕಾರ್ಯಕ್ರಮ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಬಿಸ್ಕೀಟ್‌ ಹಂಚಲು ಅಬಕಾರಿ ಇಲಾಖೆ ಅಕಾರಿಗಳಿಗೆ ಸೂಚಿಸಲಾಯಿತು.

ವೇದಿಕೆಗೆ ಟೆಂಟ್‌, ಆಸನ, ಮೈಕ್‌, ದೀಪಾಲಂಕಾರ, ಜನರೇಟರ್‌ ವ್ಯವಸ್ಥೆ ಮಾಡಬೇಕು ಹಾಗೂ ಎಲ್ಲ ಸರಕಾರಿ ಕಚೇರಿ, ಜಿಲ್ಲಾಡಳಿತ ಕಾರ್ಯಾಲಯ, ನಗರದ ವೃತ್ತಗಳಲ್ಲಿ ವಿದ್ಯುತ್‌ ದೀಪಾಲಂಕಾರದ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿ ಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಸಾರಿಗೆ ಇಲಾಖೆ ಬಸ್‌ ವ್ಯವಸ್ಥೆ ಮಾಡುವಂತೆ ಸೂಚಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಿಲ್ಲಾ ಅಬಕಾರಿ ಆಯುಕ್ತ ಜಿ.ಪಿ. ನರೇಂದ್ರಕುಮಾರ್‌, ಜಿಪಂ ಉಪ ಕಾರ್ಯದರ್ಶಿ ವಸಂತರಾವ್‌ ವಿ. ಕುಲಕರ್ಣಿ, ಸಹಾಯಕ ಆಯುಕ್ತ ಡಾ| ಬಿ.ಎಸ್‌. ಮಂಜುನಾಥಸ್ವಾಮಿ, ಜಿಲ್ಲಾ ಭಾವೈಕ್ಯತಾ ಸಮಿತಿ ಅಧ್ಯಕ್ಷ ಬಾಬು ದೋಖಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next