Advertisement

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

08:30 PM Oct 20, 2021 | Team Udayavani |

ಉಡುಪಿ: ಜಿಲ್ಲೆಯ ಸರಕಾರಿ ಕಚೇರಿಗಳನ್ನು ಇನ್ನು ಮುಂದೆ ತಂಬಾಕು ಮುಕ್ತಗೊಳಿಸಲು ಸಿದ್ಧತೆ ನಡೆದಿದೆ. ಅಂತೆಯೇ ಜಿಲ್ಲೆಯ 3 ಗ್ರಾ.ಪಂ. ವ್ಯಾಪ್ತಿ ಪ್ರದೇಶವನ್ನು “ತಂಬಾಕು ಮುಕ್ತ ಹಳ್ಳಿ’ ಮಾಡಲು ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ.

Advertisement

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶೀಘ್ರದಲ್ಲಿ ಜಾರಿಗೆ ಬರಲಿದೆ.

ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆ, ಶಾಲೆಗಳು, ಗ್ರಾ.ಪಂ. ಸಹಿತ ಸರಕಾರಿ ವ್ಯಾಪ್ತಿಗೊಳಪಡುವ ಸಂಸ್ಥೆಗಳಲ್ಲಿ ತಂಬಾಕು ಬಳಕೆ ಹಾಗೂ ಸೇವನೆ ಕಟ್ಟುನಿಟ್ಟು ನಿಷೇಧ ಮಾಡಲಾಗುತ್ತದೆ. ಇಲ್ಲಿನ ಸಿಬಂದಿ ಹಾಗೂ ಇಲ್ಲಿಗೆ ಆಗಮಿಸುವವರೂ ತಂಬಾಕು ಸೇವನೆ ಮಾಡುವಂತಿಲ್ಲ. ಈ ನಿಯಮಾವಳಿ ಉಲ್ಲಂಘಿ ಸಿದರೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಈಗಾಗಲೇ ಎಲ್ಲ ಸರಕಾರಿ ಸಂಸ್ಥೆಗಳಿಗೆ ಸುತ್ತೋಲೆಯನ್ನು ರವಾನಿಸಲಾಗಿದೆ. ಈ ಬಗ್ಗೆ ಸರಕಾರಿ ಕಚೇರಿ ಕಾಂಪೌಂಡ್‌ ಒಳಗೆ ಎಚ್ಚರಿಕೆ ಫ‌ಲಕ ಹಾಕುವಂತೆ ಸೂಚನೆ ನೀಡಲಾಗಿದೆ.

ತಂಬಾಕು ಮುಕ್ತ ಹಳ್ಳಿ
ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ತಮ್ಮ ವ್ಯಾಪ್ತಿಯ ಯಾವುದಾದರೂ ಒಂದು ಗ್ರಾಮವನ್ನು ಗುರುತಿಸಿ ಆ ಪ್ರದೇಶದಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಆ ಗ್ರಾಮದಲ್ಲಿ ತಂಬಾಕು ಉತ್ಪನ್ನಗಳು ಮಾರಾಟವಾಗದಂತೆ ಮತ್ತು ಸಾರ್ವಜನಿಕರು ಅದರ ಬಳಕೆಯಿಂದ ದೂರವಾಗುವಂತೆ ಮಾಡಿ ಅದನ್ನು “ತಂಬಾಕು ಮುಕ್ತ ಹಳ್ಳಿ’ ಮಾಡಲು ಉದ್ದೇಶಿಸಲಾಗಿದೆ. ಇದರಂತೆ ಉಡುಪಿ ತಾಲೂಕಿನ ಕೋಡಿಬೆಂಗ್ರೆ ಮತ್ತು ಕಡೆಕಾರ್‌ ಹಾಗೂ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾ.ಪಂ. ವ್ಯಾಪ್ತಿ ಪ್ರದೇಶವನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲಿಗೆ ಕೋಡಿಬೆಂಗ್ರೆಯಿಂದ ಈ ಕಾರ್ಯಕ್ರಮ ಆರಂಭವಾಗಲಿದೆ. ಇಲ್ಲಿ ಸುಮಾರು 2 ಸಾವಿರದಷ್ಟು ಜನಸಂಖ್ಯೆ ಇದ್ದು, ಈ ಹಳ್ಳಿಯಲ್ಲಿ 14 ಅಂಗಡಿಗಳಿವೆ. ಇಲ್ಲಿನ 3ರಿಂದ 4 ಅಂಗಡಿಗಳಲ್ಲಿ ಮಾತ್ರ ತಂಬಾಕು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಸಮೀಕ್ಷೆ ನಡೆಸಿ ಸಂಪೂರ್ಣ ತಂಬಾಕು ಮುಕ್ತವನ್ನಾಗಿಸಲು ಪಣ ತೊಡಲಾಗಿದೆ. ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಸಭೆ ನಡೆಸಲಾಗಿದ್ದು, ಈ ಹಳ್ಳಿಯನ್ನು ತಂಬಾಕು ಮುಕ್ತಗೊಳಿಸಲು ಗ್ರಾಮಸ್ಥರೇ ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:ಕ್ಯಾಶ್‌ಲೆಸ್‌ ವ್ಯವಹಾರದತ್ತ ಕೊಂಕಣ ರೈಲ್ವೇ : ಎಸ್ ಬಿಐನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ

Advertisement

ಜಿಲ್ಲಾಧಿಕಾರಿ ಕಚೇರಿ ತಂಬಾಕು ಮುಕ್ತ
ಈಗಾಗಲೇ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಬಳಕೆ, ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಇಡೀ ಪ್ರದೇಶವನ್ನು “ತಂಬಾಕು ಮುಕ್ತ ವಲಯ’ವನ್ನಾಗಿ ಘೋಷಿಸಲಾಗಿದೆ. ಇಲ್ಲಿನ ಸಿಬಂದಿ ಸಹಿತ ಕಚೇರಿ ಸಂಕೀರ್ಣದಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿ ಸೇರಿದಂತೆ ಕಚೇರಿಗೆ ಆಗಮಿಸುವವರು ಆವರಣದಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಬಳಕೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದರಂತೆಯೇ ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳನ್ನು ತಂಬಾಕು ಮುಕ್ತ ಕಚೇರಿ ಎಂದು ಆಯಾ ಕಚೇರಿಯ ಮುಖ್ಯಸ್ಥರು ಘೋಷಣೆ ಮಾಡಿ ನಾಮಫ‌ಲಕ ಅಳವಡಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಎಲ್ಲ ಕಚೇರಿಗಳಿಗೆ ಸುತ್ತೋಲೆ
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕದ ವತಿಯಿಂದ ತಂಬಾಕು ಬಳಕೆ, ವ್ಯಸನ ನಿಯಂತ್ರಿಸಲು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಸರಕಾರಿ ಕಚೇರಿಗಳನ್ನು ತಂಬಾಕು ಮುಕ್ತಗೊಳಿಸಲು ಎಲ್ಲ ಇಲಾಖೆಗಳಿಗೂ ಈಗಾಗಲೇ ಸುತ್ತೋಲೆ ರವಾನಿಸಲಾಗಿದೆ.
-ಡಾ| ನಾಗರತ್ನಾ
ಜಿಲ್ಲಾ ಸರ್ವೇಕ್ಷಣ ಅಧಿಕಾರಿ

ಶೀಘ್ರದಲ್ಲಿ ಸಮೀಕ್ಷೆ
ತಂಬಾಕು ಮುಕ್ತ ಹಳ್ಳಿ ಕಾರ್ಯಕ್ರಮದ ಬಗ್ಗೆ ಈಗಾಗಲೇ ಹಲವಾರು ಬಾರಿ ಸಭೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸಮೀಕ್ಷೆ ನಡೆಸಿ ತಂಬಾಕು ಮುಕ್ತ ಮಾಡಲು ಉದ್ದೇಶಿಸಲಾಗಿದೆ.
-ಮಂಜುಳಾ ಶೆಟ್ಟಿ,
ಜಿಲ್ಲಾ ಸಲಹೆಗಾರರು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next