Advertisement

ಕರದಂಟು ನಾಡಲ್ಲಿ ಅಕ್ಷರಹಬ್ಬ ಸಂಭ್ರಮ

09:42 AM Jun 29, 2019 | Team Udayavani |

ಬೆಳಗಾವಿ/ಗೋಕಾಕ(ಬಸವರಾಜ ಕಟ್ಟಿಮನಿ ವೇದಿಕೆ): ಮದುವಣ ಗಿತ್ತಿಯಂತೆ ಸಿಂಗಾರಗೊಂಡಿದ್ದ ಕರದಂಟು ನಗರಿ ಗೋಕಾಕದಲ್ಲಿ ಅಕ್ಷರ ಜಾತ್ರೆಗೆ ಶುಕ್ರವಾರ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದ್ದು, ಅಕ್ಷರ ಜಾತ್ರೆಯಲ್ಲಿ ಸೇರಿದ್ದ ಸಾವಿರಾರು ಕನ್ನಡಿಗರ ಉತ್ಸಾಹ ನಾಡಿನ ಮುಗಿಲೆತ್ತರಕ್ಕೆ ಮುಟ್ಟಿತ್ತು. ಕನ್ನಡ ಬಾವುಟಗಳ ಹಾರಾಟ, ದೇಸಿ ಸೊಗಡಿನ ಕಲಾ ತಂಡಗಳ ಮಧ್ಯೆ ಆರಂಭವಾದ ಬೆಳಗಾವಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೈಬೀಸಿ ಕರೆಯುತ್ತಿದೆ. ಗೋಕಾಕನ ಎಂ.ಬಿ. ಮುನವಳ್ಳಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಶುಕ್ರವಾರದಿಂದ ಆರಂಭವಾದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಡೀ ನಗರವೇ ಕಳೆಗಟ್ಟಿತ್ತು. ನಗರದ ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ನಗರಕ್ಕೆ ಮೆರಗು ತಂದಿತು. ಎಲ್ಲೆಡೆಯೂ ಕನ್ನಡದ ಕಹಳೆ ಮೊಳಗಿತ್ತು. ಅಲ್ಲದೇ ಮಳೆಯ ಸಿಂಚನ ನಡುವೆಯು ಕನ್ನಡ ಉತ್ಸಾಹ ಕಳೆಗುಂದಿರಲಿಲ್ಲ. ಬಸವರಾಜ ಕಟ್ಟಿಮನಿ ವೇದಿಕೆಯಲ್ಲಿ ಮಧ್ಯಾಹ್ನ ಸಮ್ಮೇಳನಕ್ಕೆ ಚಾಲನೆ ನೀಡಿದ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕನ್ನಡ ಉತ್ಸವವನ್ನು ದೊಡ್ಡ ಹಬ್ಬ ಎಂದು ಆಚರಿಸಬೇಕು. ನಾವೆಲ್ಲರೂ ಕನ್ನಡ ಜಲ, ಭಾಷೆ ವಿಚಾರ ಬಂದಾಗ ಒಂದಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಕನ್ನಡ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಪಾಲಕರು ಮುತುವರ್ಜಿ ವಹಿಸಬೇಕು ಎಂದರು.

Advertisement

 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ರಾಜ್ಯಕ್ಕೆ ಬಂದಿದ್ದ 700 ಕೋಟಿ ರೂ. ಅನುದಾನ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಿಕ್ಕಾಟದಿಂದ ವಾಪಸ್ಸು ಹೋಗಿದೆ. ಇಂಥ ಗೊಂದಲಗಳು ಆಗದೇ ಕನ್ನಡ ಶಾಲೆಗಳ ಪ್ರಗತಿಗೆ ಸರ್ಕಾರ ಕಾಳಜಿ ವಹಿಸಬೇಕು ಎಂದರು. ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್‌, ವಿಜ್ಞಾನಿಗಳು, ತಂತ್ರಜ್ಞರು ಕನ್ನಡ ಭಾಷೆಯಲ್ಲಿ ಬರೆಯುವ ಮೂಲಕ ಮಕ್ಕಳಲ್ಲಿ ಕನ್ನಡ ಬೀಜ ಬಿತ್ತಬೇಕು. ಜತೆಗೆ ಕರ್ನಾಟಕ ಸರ್ಕಾರ ಕೂಡ ಈ ಬಗ್ಗೆ ಕಾಳಜಿ ವಹಿಸಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಅವಕಾಶ ಕೊಡಬೇಕು. ಸರೋಜಿನಿ ಮಹಿಷಿ ವರದಿ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಉಪನ್ಯಾಸ ನೀಡಿದ ಡಾ| ಗುರುರಾಜ ಕರಜಗಿ, ಹೊರಗೆ ತೋರಣ ಒಳಗೆ ಹೂರಣ ಜತೆಗೆ ಕನ್ನಡದ ಪ್ರೀತಿ ಇದ್ದರೆ ಕನ್ನಡ ಹಬ್ಬ ಆಗಲು ಸಾಧ್ಯವಿದೆ.

 

ಮಾತೃಭಾಷೆಯಲ್ಲಿಯೇ ಕನಸುಗಳು ಬೀಳುತ್ತವೆ. ಬೇರೆ ಭಾಷೆಯಲ್ಲಿ ಅಲ್ಲ. ಜ್ಞಾನ ಇದ್ದವರು ಪರಿಶ್ರಮ ಹಾಕಿದಾಗ ಪ್ರಕೃತಿ ಇದ್ದದ್ದು ಸಂಸ್ಕೃತಿ ಆಗುತ್ತದೆ. ಅದನ್ನು ನಾಶ ಮಾಡುವುದೇ ವಿಕೃತಿ. ಭಾಷೆಯನ್ನು ಸರಿಯಾಗಿ ಬಳಸಿದರೆ ಸಂಸ್ಕೃತಿ, ದುರ್ಬಳಕೆಯಾದರೆ ವಿಕೃತಿ ಎಂದರು. ಕನ್ನಡವನ್ನು ಭಾಷೆಯನ್ನಾಗಿ ಕಲಿಸಬೇಕು. ಆದರೆ ಇಂಗ್ಲಿಷ್‌ನ್ನು ಭಾಷೆಯಾಗಿ ಅಲ್ಲ ಕೇವಲ ಒಂದು ವಿಷಯವಾಗಿ ಕಲಿಸಬೇಕು.ಶಿಕ್ಷಕರು ಹೃದಯದಿಂದ ಪಾಠ ಮಾಡಬೇಕೇ ಹೊರತು, ಬುದ್ಧಿಯಿಂದಲ್ಲ. ಹೃದಯವನ್ನು ಇಟ್ಟುಕೊಂಡು ಪಾಠ ಕಲಿಸಬೇಕು. ಶಿಕ್ಷಕರು ಕಲಿಸುವ ಕನ್ನಡ ಭಾಷೆಯ ಪಾಠ ಕನ್ನಡದ ಬಗ್ಗೆ ಕಿಚ್ಚು , ಹುಚ್ಚು ಹಚ್ಚಿಸುವ ಕೆಲಸ ಮಾಡಬೇಕು. ಭಾಷೆ ಬೆಳೆಸಲು ಕನ್ನಡ ಮೊದಲು ಬೇಕು ಎಂದರು. ಸಮ್ಮೇಳನಾಧ್ಯಕ್ಷೆ ಡಾ| ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು. ನಿಡಸೋಸಿ ದುರದುಂಡೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಜ್ಯೋತಿ ಹೊಸೂರ, ನೀಲಗಂಗಾ ಚರಂತಿಮಠ, ಅಶೋಕ ಪೂಜಾರಿ, ಸಿದ್ದಲಿಂಗ ದಳವಾಯಿ, ಚಂದ್ರಶೇಖರ ಅಕ್ಕಿ, ಜಯಾನಂದ ಮುನವಳ್ಳಿ, ಎಸ್‌.ಯು. ಕೋತವಾಲ, ಡಾ| ರಾಜೇಂದ್ರ ಸಣ್ಣಕ್ಕಿ, ಜ್ಯೋತಿ ಬಾದಾಮಿ, ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪನವರ, ತಾಪಂ ಇಒ ಬಸವರಾಜ ಹೆಗ್ಗನಾಯಿಕ, ಪೌರಾಯುಕ್ತ ವಿಠuಲ ತಡಸಲೂರ, ಕೆಂಪಣ್ಣ ವಣ್ಣೂರ, ಎನ್‌.ಎನ್‌. ಕಾಂಬಳೆ, ಮುರಳೀಧರ ತಳ್ಳಿಕೇರಿ, ಶಾಮಾನಂದ ಪೂಜೇರಿ ಇತರರು ಇದ್ದರು.

Advertisement

•ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next