Advertisement
ಚೆಕ್ ವಿತರಿಸಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಈ ಹಿಂದೆ ನೌಕರರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಅವರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿ, ಅವುಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿತ್ತು. ಈ ಪೈಕಿ ನಾಲ್ಕು ಸಾರಿಗೆ ನಿಗಮಗಳ 1,308 ಚಾಲನಾ ಮತ್ತು ತಾಂತ್ರಿಕ ಸಿಬಂದಿ ಅಂತರ ನಿಗಮ ವರ್ಗಾವಣೆಯ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಎಲ್ಲ 11,694 ನಿವೃತ್ತ ಸಿಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತವನ್ನು ಅಧಿವೇಶನದ ಅನಂತರ ಬಿಡುಗಡೆಗೊಳಿಸುವುದಾಗಿ ನೀಡಿದ್ದ ಭರವಸೆಯಂತೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
4 ಸಾರಿಗೆ ನಿಗಮಗಳಲ್ಲಿ 2020ರ ಜ. 1ರಿಂದ 2023ರ ಫೆ. 28ರ ವರೆಗಿನ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತಿ ಹೊಂದಿರುವ ಸುಮಾರು 11,694 ಸಿಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತ 224.05 ಕೋಟಿ ರೂ.ಗಳನ್ನು ಆರ್ಟಿಜಿಎಸ್ ಹಾಗೂ ಚೆಕ್ ಮುಖಾಂತರ ನಿವೃತ್ತಿ ಹೊಂದಿದ ಸಿಬಂದಿಗೆ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ. -ಸಂಸ್ಥೆಗಳು ಹಾಗೂ ಪಾವತಿಸುವ ಮೊತ್ತದ ವಿವರ:
*ಕರಾರಸಾ ನಿಗಮ- 4711 ಸಿಬಂದಿ, 86.55 ಕೋಟಿ ರೂ.
*ಬೆಂಮಸಾ ಸಂಸ್ಥೆ- 1,833 ಸಿಬಂದಿ, 50.25 ಕೋಟಿ ರೂ.
*ವಾಕರಸಾ ಸಂಸ್ಥೆ- 3,116 ಸಿಬಂದಿ, 51.50 ಕೋಟಿ ರೂ.
*ಕಕರಸಾ ಸಂಸ್ಥೆ- 2034 ಸಿಬಂದಿ, 35.75 ಕೋಟಿ ರೂ.
*ಒಟ್ಟು 11,694 ಸಿಬಂದಿ, 224.05 ಕೋಟಿ ರೂ.