ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಮಂಜೂರಾಗಿರುವ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ (ಎಂಜಿಎನ್‌ವಿವೈ) ಅನುದಾನವನ್ನು ವಾರ್ಡ್‌ವಾರು ಹಂಚಿಕೆ ಮಾಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದ ಕ್ರಿಯಾಯೋಜನೆ ತಯಾರಿಸುವ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು.
ಮಂಜೂರಾಗಿರುವ 150 ಕೋಟಿ ರೂ.ಗಳಲ್ಲಿ 80 ಕೋಟಿ ರೂ. ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಮೀಸಲಿಡುವುದು. 10 ಕೋಟಿ ರೂ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಯೋಜನೆಗಳಿಗೆ ನೀಡುವುದು. ಉಳಿದ 60 ಕೋಟಿ ರೂ.ವನ್ನು ಪ್ರತಿ ವಾರ್ಡುಗಳಿಗೆ ಹಂಚಿಕೆ ಮಾಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.
ಹಂಚಿಕೆ ಜಟಾಪಟಿ: ಅನುದಾನ ಹಂಚಿಕೆ ಕುರಿತು ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಮಹಾನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ನಾಲ್ವರು ಶಾಸಕರು ಹಾಗೂ ಓರ್ವ ಸಂಸದರು ತಲಾ 20-30 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ 70 ಕೋಟಿ ರೂ. ಮಾತ್ರ ಅನುದಾನ ಇರುವುದರಿಂದ ಹಂಚಿಕೆ ಮಾಡುವುದಾದರು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿತು. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೆಲ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರಿಗೆ ಮನವಿ ಮಾಡಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕೇಂದ್ರ ಸಚಿವರು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 9 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ನಾನು ಕೈಗೊಳ್ಳಬಹುದಾದ ಕಾಮಗಾರಿಗಳು ಅವರ ಪ್ರಸ್ತಾವನೆಯಲ್ಲಿಲ್ಲ. ಅವರಿಗೆ ಮೀಸಲಿಡುವ ಅನುದಾನವನ್ನು ನನ್ನ ಕ್ಷೇತ್ರದ ಪಾಲು ಎಂದು ಗಣನೆಗೆ ತೆಗೆದುಕೊಂಡರೆ ನನ್ನದೆ ಆದ ಕೆಲ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ.
ಕೇಂದ್ರ ಸಚಿವರಿಗೆ ಪ್ರತ್ಯೇಕವಾಗಿ ಅನುದಾನ ನೀಡಿ, ನನ್ನ ಕ್ಷೇತ್ರಕ್ಕೆ ಬರಬೇಕಾದ ಅನುದಾನ ನೀಡುವಂತೆ ಮನವಿ ಮಾಡಿದರು. ಚರ್ಚೆಯ ನಂತರ 10 ಕೋಟಿ ರೂ. ಕೇಂದ್ರ ಸಚಿವರಿಗೆ ಮೀಸಲಿಡುವುದು ಉಳಿದ ಅನುದಾನವನ್ನು ಎಲ್ಲಾ ವಾರ್ಡುಗಳಿಗೆ ಸಮಾನವಾಗಿ ಹಂಚಿಕೆ ಮಾಡುವ ನಿರ್ಧಾರಕ್ಕೆ ಬರಲಾಯಿತು.
ಸಚಿವ ಜಗದೀಶ ಶೆಟ್ಟರ ಮಾತನಾಡಿ, ನಿಗದಿತ ವೇಳೆಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿದರೆ ಇನ್‌ಸೆಂಟಿವ್‌ಗೆ ಮೀಸಲಿಟ್ಟ ಹಣ ಪಾಲಿಕೆಗೆ ದೊರೆಯಲಿದ್ದು, ಇದರಿಂದ ಇತರೆ ಯಾವುದಾದರೂ ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿದೆ.
ಹೀಗಾಗಿ ಮೂರ್‍ನಾಲ್ಕು ದಿನಗಳಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಈ ಯೋಜನೆಯಲ್ಲಿ ವಾರ್ಡುಗಳಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಸೂಕ್ತ ಕಾಳಜಿ ವಹಿಸಿ ಸದ್ಬಳಕೆ ಆಗುವಂತೆ ಗಮನ ಹರಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಆದಷ್ಟು ಬೇಗ ಟೆಂಡರ್ ಕರೆದು ಕೆಲಸಗಳನ್ನು ಆರಂಭಿಸುವ ಕುರಿತು ಪಾಲಿಕೆ ಆಯುಕ್ತರು ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಪ್ರಾದೇಶಿಕ ಆಯುಕ್ತ ಹಾಗೂ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್, ಜಿಲ್ಲಾಧಿಕಾರಿ ದೀಪಾ ಚೋಳನ್, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ವಲಯ ಸಹಾಯಕ ಆಯುಕ್ತರು ಹಾಗೂ ಇನ್ನಿತರರಿದ್ದರು.