ಅಜೆಕಾರು: ಅಧಿಕಾರಿಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದಾಗ ಜನಸಾಮಾನ್ಯರು ತಾಲೂಕು ಕಚೇರಿ ಜತೆ ನಿರಂತರ ಸಂಪರ್ಕವನ್ನಿಟ್ಟುಕೊಳ್ಳುತ್ತಾರೆ ಆಗ ಅರ್ಹ ಫಲಾನುಭವಿಗೆ ಸರಕಾರದ ಸವಲತ್ತು ಸಿಗುತ್ತದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ತಾಲೂಕು ಕಚೇರಿ ಹಾಗೂ ಕಂದಾಯ ವಿಭಾಗದ ವತಿಯಿಂದ ಜನತೆಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಜೂ. 26ರಂದು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಸರಕಾರವು 94ಸಿ ಮತ್ತು 94ಸಿಸಿ ಯೋಜನೆಯಡಿ ಹಕ್ಕುಪತ್ರ ವಿತರಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಒಟ್ಟು 51 ಫಲಾನುಭವಿಗಳಿಗೆ ಪ್ರಸ್ತುತ ಹಕ್ಕುಪತ್ರವನ್ನು ವಿತರಿಸಲಾಗುತ್ತಿದೆ. ಜತೆಗೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಾರಿಗೊಳಿಸಿದ್ದ ಭಾಗ್ಯಲಕ್ಷ್ಮೀ ಯೋಜನೆ ಬಾಂಡ್ ವಿತರಣೆಗೆ ಮರು ಚಾಲನೆ ದೊರೆತಿದ್ದು, ತಾಲೂಕಿನ 20 ಫಲಾನುಭವಿಗಳಿಗೆ ಆ ಬಾಂಡ್ ವಿತರಿಸಲಾಗಿದೆ. ಜತೆಗೆ ಪ್ರಾಕೃತಿಕ ವಿಕೋಪದಡಿ ಸಂತ್ರಸ್ತರಾದ 102 ಫಲಾನುಭವಿಗಳಿಗೆ ಪರಿಹಾರಧನದ ಚೆಕ್ ನೀಡಲಾಗಿದೆ. ಸರಕಾರದ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ಜನತೆಗೆ ತಲುಪಿಸುವಲ್ಲಿ ವಿಶೇಷ ಮುತುವರ್ಜಿಯನ್ನು ಕಂದಾಯ ಇಲಾಖೆ ವಹಿಸಿದ್ದು, ಕ್ಷೇತ್ರ ತಹಶೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಈ ಸಂದರ್ಭ ಅಭಿನಂದಿಸುವುದಾಗಿ ಹೇಳಿದರು.
ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಉದಯ ಎಸ್. ಕೋಟ್ಯಾನ್, ಸುಮಿತ್ ಶೆಟ್ಟಿ ಕೌಡೂರು, ರೇಷ್ಮಾ ಉದಯ ಶೆಟ್ಟಿ, ತಾ.ಪಂ. ಸದಸ್ಯರಾದ ಹರೀಶ್ ನಾಯಕ್, ಅಶೋಕ್ ಶೆಟ್ಟಿ, ದುರ್ಗ ಗ್ರಾ.ಪಂ. ಅಧ್ಯಕ್ಷೆ ದೇವಕಿ ಮೂಲ್ಯ, ಕುಕ್ಕುಂದೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಂತೋನಿ ಡಿ’ಸೋಜಾ, ತಾ.ಪಂ. ಸಿಇಒ ಮೇಜರ್ ಹರ್ಷ ಕೆ.ಬಿ., ತಹಶೀಲ್ದಾರ್ ಪುರಂದರ ಹೆಗ್ಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಕುಮಾರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ರವಿ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.