Advertisement
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಲಾಗಿರುವ ಮಾರುಕಟ್ಟೆಯನ್ನು ಹಲವು ತಿಂಗಳು ಕಳೆದರೂ ಹರಾಜು ಪ್ರಕ್ರಿಯೆ ನಡೆಸದ ಪರಿಣಾಮ ತರಕಾರಿ ವ್ಯಾಪಾರಸ್ಥರಿಗೆ ಮೂಲ ಸೌಲಭ್ಯದ ಕೊರೆತೆಯಾಗಿದೆ. ಹಾಗಾಗಿ ಅಧಿಕಾರಿಗಳು ತ್ವರಿತವಾಗಿ ಹರಾಜು ಪ್ರಕ್ರಿಯೆ ನಡೆಸಿ ವ್ಯಾಪಾರಸ್ಥರಿಗೆ ಅನೂಕೂಲ ಮಾಡಿಕೊಡುವಂತೆ ಸದಸ್ಯರು ಸಭೆಯಲ್ಲಿ ಸೂಚಿಸಿದರು.
2ನೇ ವಾರ್ಡ್ ಸದಸ್ಯ ರಾಘವೇಂದ್ರ ಮಾತನಾಡಿ, ಪಟ್ಟಣ ವಾಪ್ತಿಯಲ್ಲಿ ನಡೆಸಲಾಗಿರುವ ಸಾಕಷ್ಟು ಕಾಮಗಾರಿಗಳಿಗೆ ಎರಡೆರಡು ಬಾರಿ ಬಿಲ್ ಪಾವತಿ ಮಾಡಲಾಗಿದೆ. ಇದೂ ಹೇಗೆ ಎಂದು ಜೂನಿಯರ್ ಎಂಜಿನಿಯರ್ ಪುರುಷೋತ್ತಮ್‌ರನ್ನು ಪ್ರಶ್ನಿಸಿದರು. ಉತ್ತರಿಸಿದ ಎಂಜಿನಿಯರ್ ಕಾಮಗಾರಿಗೆ ಬಂದತಹ ಹಣವನ್ನು ಆಯಾ ವಾರ್ಡ್‌ಗಳಿಗೆ ಉಪಯೋಗ ಮಾಡದೇ ಎಲ್ಲಾ ವಾರ್ಡ್‌ಗಳಿಗೂ ಹಂಚಿಕೆ ಮಾಡಲಾಗುತ್ತಿರುವುದರಿಂದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಮುಂದುವರೆದ ಕಾಮಗಾರಿಯಾಗಿ ಮಾಡಿ ಮತ್ತೂಂದು ಬಿಲ್ ಪಾವತಿ ಮಾಡಲಾಗುತ್ತಿದೆ ಎಂದು ಉತ್ತರಿಸಿದರು.
Related Articles
Advertisement
ಭೈರಾಪುರ, ಆಲಗೂಡು ಗ್ರಾಮ ವ್ಯಾಪ್ತಿಗಳಲ್ಲಿ ವಾರ್ಡ್ ಸಭೆ ನಡೆಸಿ ಜನರ ಸಮಸ್ಯೆ ಆಲಿಸುವಂತೆ ಕಳೆದ ಮೂರ್‍ನಾಲ್ಕು ಸಭೆಗಳಿಂದ ಹೇಳುತ್ತ ಬಂದರೂ ಇದೂವರೆವಿಗೂ ಯಾವುದೇ ಸಭೆ ನಡೆಸಿಲ್ಲ ಇದೂ ಏಕೆ ಎಂದು ಸದಸ್ಯ ನಾಗೇಂದ್ರ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ನಾಗರತ್ನ, ಅನುದಾನದ ಕೊರತೆ ಇರುವುದರಿಂದ ವಾರ್ಡ್ ಸಭೆ ನಡೆಸಿಲ್ಲ. ಸಭೆ ನಡೆಸಿ ಜನರ ಅಹವಾಲು ಸ್ವೀಕರಿಸಿದ ಮೇಲೆ ಕನಿಷ್ಠ ಶೇ 50 ಸಮಸ್ಯೆ ಬಗೆಹರಿಸಬೇಕು. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ವಾರ್ಡ್ ಸಭೆ ನಡೆಸಿಲ್ಲ ಎಂದು ವಿವರಣೆ ನೀಡಿದರು.
ಖಾಸಗಿ ಬಸ್ ನಿಲ್ದಾಣದಲ್ಲಿನ ಹಳೇ ಶೌಚಾಲಯನ್ನು ಪುನಶ್ಚೇತನಗೊಳಿಸಲು ಹಾಗೂ ಭೈರಾಪುರ. ಹಳೆ ತತಿರುಮಕೂಡಲು, ಹೆಳವರಹುಂಡಿ, ಪೇಟೆಕೇರಿ ಬೀದಿ, ಆಲಗೂಡು, ಶ್ರೀರಾಂಪುರದಲ್ಲಿ ಬಡಾವಣೆಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ಸರ್ವೆ ನಂ 7ರಲ್ಲಿ ನಿವೇಶನ ಹಂಚಿ ವಸತಿ ಸಮುಚ್ಚಾಯ ನಿರ್ಮಿಸುವ ಕುರಿತು ಕಳೆದ 40 ವರ್ಷಗಳ ಹಿಂದಿನಿಂದಲೂ ಸಮಸ್ಯೆ ಬಗೆ ಹರಿದಿಲ್ಲ. ಈ ಬಗ್ಗೆ ಸ್ಥಳೀಯ ಎಂಎಲ್‌ಸಿ ಧರ್ಮಸೇನಾ ಅವರ ಗಮನಕ್ಕೆ ತರದೇ ಪುರಸಭೆ ಸದಸ್ಯರುಗಳಾದ ನೀವುಗಳೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸದಸ್ಯ ಸಿ.ಮಹದೇವ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ತ್ರಿವೇಣಿ ನಗರ, ಬೈರಾಪುರ , ಶ್ರೀ ಗುಂಜಾನರಸಿಂಹಸ್ವಾಮಿ ದೇಗುಲ, ಖಾಸಗಿ ಬಸ್ ನಿಲ್ದಾಣಗಳಲ್ಲಿ ಶೀಘ್ರವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ತೀರ್ಮಾನಿಸಲಾಯಿತು. ಅಧ್ಯಕ್ಷೆ ಸುಧಾ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಮೀನಾಕ್ಷಿ, ಶಶಿಕಲಾ, ರಾಜಮ್ಮ, ಶೃತಿ, ರಾಘವೇಂದ್ರ, ಟಿ.ಜಿ. ಪುಟ್ಟಸ್ವಾಮಿ, ಮಲ್ಲೇಶ್, ಅಧಿಕಾರಿಗಳಾದ ಕಂದಾಯ ಅಧಿಕಾರಿ ರಾಣಿ, ಪುಟ್ಟಸ್ವಾಮಿ, ವಿನಯ್‌ಕುಮಾರ್, ಕೆಂಪರಾಜು, ಆಶಾ, ಮಹದೇವು, ಮೈತ್ರಾವತಿ ಇತರರು ಇದ್ದರು.