ಹುಣಸೂರು: ಕೇಂದ್ರ ಸರ್ಕಾರ ರೈತರ ಅಭ್ಯುದಯಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಬಳಸಿಕೊಂಡು ಕೃಷಿ ಸುಧಾರಣೆಗೆ ಮುಂದಾಗಬೇಕೆಂದು ಸಂಸದ ಪ್ರತಾಪಸಿಂಹ ಮನವಿ ಮಾಡಿದರು.
ತಾಲೂಕಿನ ಗಾವಡಗೆರೆಯಲ್ಲಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಒಂದೇ ಬೆಳೆ ಬೆಳೆಯುವುದರಿಂದ ಮಣ್ಣನ ಸತ್ವ ಕಳೆದುಕೊಂಡಿರುತ್ತದೆ. ಅಲ್ಲದೆ ರಾಸಾಯನಿಕ ಬಳಕೆ ಮಾಡುವುದರಿಂದ ಬೆಳೆಗಳಲ್ಲಿ ಹೆಚ್ಚಿನ ರೋಗಗಳು ಕಂಡು ಬರುತ್ತಿವೆ ಎಂದರು.
ಮಣ್ಣಿನ ಆರೋಗ್ಯ ಕಾರ್ಡ್: ಕೃಷಿ ಇಲಾಖೆ ಮಣ್ಣಿನ ಪರೀಕ್ಷೆಗಾಗಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸುತ್ತಿದ್ದು, ಎಲ್ಲ ರೈತರೂ ಕಡ್ಡಾಯವಾಗಿ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಬೇಕು. ಪ್ರತಿಯೊಬ್ಬರೂ ಕಾರ್ಡ್ ಪಡೆದುಕೊಳ್ಳಬೇಕು.
ವಿಜ್ಞಾನಿಗಳು ಶಿಪಾರಸು ಮಾಡಿದ ಬೆಳೆಯನ್ನೇ ಬೆಳೆಯಬೇಕು. ತಮ್ಮ ಜಮೀನುಗಳಿಗೆ ಕೊಟ್ಟಿಗೆ, ಸಾವಯವ ಗೊಬ್ಬರ ಬಳಸಿದಲ್ಲಿ ಫಲವತ್ತತೆ ಹೆಚ್ಚುವ ಜೊತೆಗೆ ಮಣ್ಣಿನ ಆರೋಗ್ಯ ಕಾಪಾಡಬಹುದು. ಇದರಿಂದ ಪೌಷ್ಟಿಕಾಂಶ ಆಹಾರ ಬೆಳೆ ಬೆಳೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ವಿಶ್ವನಾಥ್, ಜಿಪಂ ಸದಸ್ಯೆ ಸಾವಿತ್ರಿ, ಮಾಜಿ ಸದಸ್ಯ ರಮೇಶ್‌ಕುಮಾರ್, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮಕುಮಾರ್, ಇಒ ಕೃಷ್ಣಕುಮಾರ್, ಕೃಷಿ ಇಲಾಖೆ ಉಪನಿರ್ದೇಶಕ ಧನಂಜಯ, ಸಹಾಯಕ ನಿರ್ದೆಶಕ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಶೀಲಾವತಿ, ಉಪಾಧ್ಯಕ್ಷೆ ಜಯಶೀಲ, ಪಿಡಿಒ ಲೋಕೇಶ್, ಕೃಷಿ ಅಧಿಕಾರಿ ಮಧುಲತಾ, ವೀರೇಶರಾವ್ ಬೋಬಡೆ, ರೈತರು ಹಾಜರಿದ್ದರು.