ಕಾಪು: ಬಿರುವೆರ್ ಕಾಪು ಸೇವಾ ಟ್ರಸ್ಟ್‌ನ ನಾಲ್ಕನೇ ಯೋಜನೆ ಜ್ಞಾನದೀವಿಗೆ – ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವು ಜೂ. 30ರಂದು ಇನ್ನಂಜೆ ದಾಸ ಭವನದಲ್ಲಿ ನಡೆಯಿತು.
ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಕಾರ್ಯದರ್ಶಿ ನವೀನ್‌ಚಂದ್ರ ಸುವರ್ಣ ಅಡ್ವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಟ್ರಸ್ಟ್ ಗ್ರಾಮೀಣ ಭಾಗದಲ್ಲಿ ಹಲವು ಜನಸೇವಾ ಕಾರ್ಯ ನಡೆಸುವ ಮೂಲಕ ಸಮಾಜದ ಜನರನ್ನು ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನ ನಡೆಸುತ್ತಿದೆ. ಇಂತಹ ಸೇವಾ ಕಾರ್ಯ ನಿರಂತರ ನಡೆಸುವ ಮೂಲಕ ಅಭಿವೃದ್ಧಿ ಪೂರಕವಾಗಿ ಸ್ಪಂದಿಸಲು ಸಾಧ್ಯ ಎಂದರು.
ಬಿರುವೆರ್ ಕಾಪು ಸೇವಾ ಟ್ರಸ್ಟ್ ಮತ್ತು ವಿವಿಧ ದಾನಿಗಳು ಹಾಗೂ ಇನ್ನಂಜೆ ಬಿಲ್ಲವ ಸೇವಾ ಸಂಘದ ಜಂಟಿ ಸಹಕಾರದೊಂದಿಗೆ ಜರಗಿದ ಕಾರ್ಯಕ್ರಮದಲ್ಲಿ ಅರ್ಹ ಹದಿನಾಲ್ಕು ಮಂದಿ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಯಿತು. ಇನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ರಮಾನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಬಿಲ್ಲವ ಪರಿಷತ್‌ನ ಸಂಚಾಲಕ ನವೀನ್ ಅಮೀನ್ ಶಂಕರಪುರ, ಕಾಪು ಯುವವಾಹಿನಿ ಘಟಕದ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್, ಯುವವಾಹಿನಿ ನಿಯೋಜಿತ ಕಾರ್ಯದರ್ಶಿ ಸುಧಾಕರ ಸಾಲ್ಯಾನ್, ಇನ್ನಂಜೆ ಬಿಲ್ಲವರ ಸೇವಾ ಸಂಘದ ಕಾರ್ಯದರ್ಶಿ ಹರೀಶ್ ಪೂಜಾರಿ ಅತಿಥಿಗಳಾಗಿದ್ದರು.
ಬಿರುವೆರ್ ಕಾಪು ಸೇವಾ ಟ್ರಸ್ಟ್‌ನ ಪದಾಧಿಕಾರಿಗಳಾದ ಪ್ರಶಾಂತ್ ಪೂಜಾರಿ, ಕಾರ್ತಿಕ್ ಅಮೀನ್, ಅನಿಲ್ ಅಮೀನ್ ಕಾಪು ಮೊದಲಾದವರು ಉಪಸ್ಥಿತರಿದ್ದರು. ಸಂಘಟನ ಸಮಿತಿ ಸದಸ್ಯರಾದ ಅರವಿಂದ್ ಕೋಟ್ಯಾನ್ ಕಲ್ಲುಗುಡ್ಡೆ ಸ್ವಾಗತಿಸಿದರು. ಮನೋಹರ್ ಅಂಚನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.