ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗದಿಂದ ರೈತರಿಗಾಗಿ ತಯಾರಿಸಲಾಗಿರುವ ಸಸಿಗಳನ್ನು ಶಾಸಕ ಶಿವಾನಂದ ಪಾಟೀಲ ಅವರು ರೈತರಿಗೆ ಸಸಿಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.
ಆಲಮಟ್ಟಿ ಎಡದಂಡೆ ಮುಖ್ಯ ಸ್ಥಾವರ ಸಸ್ಯ ಪಾಲನಾಲಯ, ಸಂಗೀತ ನೃತ್ಯ ಕಾರಂಜಿ ಸಸ್ಯ ಪಾಲನಾಲಯ ಹಾಗೂ ಅಣೆಕಟ್ಟು ವಿಭಾಗದ ಹಿಂಭಾಗದಲ್ಲಿರುವ ಸಸ್ಯ ಪಾಲನಾಲಯಗಳಿಗೆ ತೆರಳಿ ಸಸಿಗಳನ್ನು ವಿತರಿಸಿದರು. ನಂತರ ಅಣೆಕಟ್ಟು ವಿಭಾಗದ ಹಿಂಭಾಗದಲ್ಲಿರುವ ಸಸ್ಯ ಪಾಲನಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಕಳೆದ 2016-17ನೇ ಸಾಲಿನಿಂದ ಆರಂಭಗೊಂಡಿರುವ ಕೋಟಿ ವೃಕ್ಷ ಅಭಿಯಾನದಿಂದ ಈ ಭಾಗವು ಹಸಿರೀಕರಣ ಗೊಳ್ಳಲು ಸಾಧ್ಯವಾಗಿದೆ ಎಂದರು.
ಆಲಮಟ್ಟಿಯ ವಿವಿಧ ನರ್ಸರಿಗಳಲ್ಲಿ ತಯಾರಿಸಲಾಗಿರುವ ಸಸಿಗಳು ಉತ್ಕೃಷ್ಠ ಮಟ್ಟದ್ದಾಗಿದ್ದು ರೈತರಿಗೆ ರಿಯಾಯ್ತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಇದರಿಂದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಗದಗ ಸೇರಿದಂತೆ ಬಹುತೇಕ ಉತ್ತರ ಕರ್ನಾಟಕದ 12 ಜಿಲ್ಲೆಗಳಿಂದ ರೈತರು ಆಗಮಿಸಿರುವುದು ಸಂತಸದಾಯಕವಾಗಿದೆ. ಉತ್ಕೃಷ್ಠ ಸಸಿಗಳನ್ನು ತಯಾರಿಸುತ್ತಿರುವುದರಿಂದ ರೈತರ ಜಮೀನಿನಲ್ಲಿ ನೆಟ್ಟಿರುವ ಸಸಿಗಳು ಗಿಡಗಳಾಗುತ್ತಿವೆ. ಇದರಿಂದ ಪ್ರತಿ ವರ್ಷವೂ ಬೇಡಿಕೆ ಹೆಚ್ಚಾಗುತ್ತಿದೆ. ಮುಂದಿನ ಬಾರಿ ರೈತರ ಬೇಡಿಕೆಗನುಗುಣವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ತಯಾರಿಸಬೇಕು ಎಂದು ಸಲಹೆ ನೀಡಿದರು.
ಆಲಮಟ್ಟಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ಪೈ, ಆಲಮಟ್ಟಿಯಲ್ಲಿ 3 ನರ್ಸರಿಗಳಲ್ಲಿ 7.20 ಲಕ್ಷ ಹಾಗೂ ಕುಂದರಗಿ ಮತ್ತು ಬಸವಸಾಗರ ನರ್ಸರಿಗಳಲ್ಲಿ 4.41ಲಕ್ಷ ಸಸಿಗಳು ಸೇರಿ ಒಟ್ಟು 11.61 ಲಕ್ಷ ಸಸಿಗಳನ್ನು ತಯಾರಿಸಲಾಗಿದೆ. ಇದರಲ್ಲಿ 2.61 ಲಕ್ಷ ಸಸಿಗಳನ್ನು ಇಲಾಖೆ ವತಿಯಿಂದ ರಸ್ತೆ ಬದಿ ಮತ್ತು ವಿವಿಧ ನೆಡು ಪೋಪುಗಳಿಗೆ ಬಳಸಿಕೊಳ್ಳಲಾಗುತ್ತದೆ. ಇನ್ನುಳಿದ 9 ಲಕ್ಷ ವಿವಿಧ ಜಾತಿಯ ಹಣ್ಣಿನ ಸಸಿಗಳು, ಕಸಿ ಮಾಡಿದ ಸಸಿಗಳು, ಅಲಂಕಾರಿಕ, ಮಹಾಗನಿ, ಬಿದಿರು, ಹುಣಸೆ ಸಸಿಗಳನ್ನು ರೈತರಿಗೆ, ವಿವಿಧ ಸಂಘ ಸಂಸ್ಥೆಗಳಿಗೆ, ಶಾಲಾ-ಕಾಲೇಜುಗಳಿಗೆ ನರ್ಸರಿಗಳಲ್ಲಿನ ಸಸಿಗಳು ಖಾಲಿಯಾಗುವವರೆಗೆ ವಿತರಿಸಲಾಗುತ್ತದೆ ಎಂದರು.
ನಮ್ಮಲ್ಲಿರುವ ಸಿಬ್ಬಂದಿಗಳ ಲಭ್ಯತೆಗನುಸಾರವಾಗಿ ಒಂದು ನರ್ಸರಿಯಿಂದ ಒಂದು ದಿನಕ್ಕೆ 40 ರೈತರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಸಸಿ ಪಡೆಯಲು ಆಗಮಿಸುವ ರೈತರಿಗೆ ಟೋಕನ್ ನೀಡಲಾಗಿರುತ್ತದೆ. ಸಂಬಂಧಿಸಿದ ದಿನದಂದು ರೈತರು ಆಗಮಿಸಿ ತಮಗೆ ಬೇಕಾದ ಸಸಿಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಶಾಸಕ ಶಿವಾನಂದ ಪಾಟೀಲ ಅವರು ರೈತರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗದ ತಂತ್ರಾಂಶ ಬಿಡುಗಡೆಗೊಳಿಸಿದರು. ಗ್ರಾಪಂಅಧ್ಯಕ್ಷ ಮಂಜುನಾಥ ಹಿರೇಮಠ, ತಾಪಂ ಮಾಜಿ ಸದಸ್ಯ ಮಲ್ಲು ರಾಠೊಡ, ಭೀಮಾಶಂಕರ ಉದಂಡಿ, ಅಧಿಕಾರಿಗಳಾದ ಆಲಮಟ್ಟಿ ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ, ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ, ಮಲ್ಲಿಕಾರ್ಜುನ ಬಿ, ಎ.ಎಸ್.ಕಾಳೆ ಮೊದಲಾದವರಿದ್ದರು.