ಅಫಜಲಪುರ: ಕೋವಿಡ್ ಮಹಾಮಾರಿ ಜಗತ್ತಿಗೆ ಕಂಟಕವಾಗಿ ಪರಿಣಮಿಸಿದೆ. ಈ ರೋಗಕ್ಕೆ ತುತ್ತಾಗಿ ಜೀವ ಕಳೆದುಕೊಂಡ ಕುಟುಂಬಸ್ಥರಿಗೆ ಸರ್ಕಾರದಿಂದ ಬಂದ ಒಂದು ಲಕ್ಷ ರೂ. ಚೆಕ್‌ನ್ನು ಶಾಸಕ ಎಂ.ವೈ. ಪಾಟೀಲ ವಿತರಿಸಿದರು.
ನಂತರ ಮಾತನಾಡಿದ ಅವರು, ಸರ್ಕಾರಕ್ಕೆ ಹೋದ ಜೀವಗಳನ್ನು ಮರಳಿಸಲು ಸಾಧ್ಯವಾಗುವುದಿಲ್ಲ. ಬದಲಾಗಿ ನೊಂದವರಿಗೆ ಸಾಂತ್ವನ ಹೇಳಿ ಸಹಾಯ ಮಾಡಲು ಸಾಧ್ಯವಿದೆ. ಹೀಗಾಗಿ ಸರ್ಕಾರದಿಂದ ಬಂದ ಚೆಕ್ ಹಣವನ್ನು ನೊಂದ ಕುಟುಂಬಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಬಳಕೆ ಮಾಡಿ ಉಜ್ವಲ ಜೀವನ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೊರೊನಾ ಮಹಾಮಾರಿ ಹೆಚ್ಚಾಗಿದ್ದ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಸರಿಯಾಗಿ ಚಿಕಿತ್ಸೆ ಸಿಗದೆ ಅನೇಕರು ಮೃತಪಟ್ಟಿದ್ದಾರೆ. ಈ ಕುರಿತು ಸರ್ಕಾರದ ಬಳಿ ಮಾಹಿತಿಯೇ ಇಲ್ಲ. ರಾಜ್ಯದಲ್ಲೀಗ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಸರ್ಕಾರ ಅಧಿಕಾರದಲ್ಲಿದೆ. ಸರ್ಕಾರಕ್ಕೆ ಮನಸ್ಸಿದ್ದರೆ ಮೃತಪಟ್ಟ ಎಲ್ಲ ಕುಟುಂಬಗಳಿಗೂ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು.
ಮೊದಲ ಹಂತದಲ್ಲಿ 51 ಜನರ ಪೈಕಿ 23 ಜನರಿಗೆ ಚೆಕ್ ವಿತರಣೆ ಮಾಡಲಾಗಿದ್ದು, ಉಳಿದ 19 ಜನರಿಗೆ ಬಳಿಕ ನೀಡಲಾಗುವುದು ಎಂದರು.
ತಹಶೀಲ್ದಾರ ನಾಗಮ್ಮ ಎಂ.ಕೆ, ವೈದ್ಯಾಧಿಕಾರಿ ಡಾ| ಅಭಯಕುಮಾರ, ಮುಖಂಡರಾದ ರಾಜಶೇಖರ ಪಾಟೀಲ, ಪಪ್ಪು ಪಟೇಲ್, ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ಚಂದು ಕರ್ಜಗಿ, ಶಿವಾನಂದ ಗಾಡಿಸಾಹುಕಾರ, ಶರಣು ಕುಂಬಾರ, ರವಿ ನಂದಶೆಟ್ಟಿ, ನಿಂಗು ಛಲವಾದಿ, ನಾಗಪ್ಪ ಆರೇಕರ, ಮಲ್ಲಯ್ಯ ಹೊಸಮಠ, ರೇಣುಕಾ ಸಿಂಗೆ, ಶಾಂತಕುಮಾರ ದೇಸಾಯಿ ಇನ್ನಿತರರು ಇದ್ದರು.